

ಬೆಂಗಳೂರು, ಮೇ 02: ಮುಂದಿನ ಕೆಲವೇ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕ ವಿವಿಧ ಜಿಲ್ಲೆಗಳಿಗೆ ಮಳೆಯ ಆಘಾತ ಎದುರಾಗುವ ಸಂಭವವಿದೆ. ಹವಾಮಾನದಲ್ಲಿ ಬದಲಾಗೊಂಡ ವೈಪರಿತ್ಯ ತೀವ್ರ ಸ್ವರೂಪ ಪಡೆದಿರುವುದು ಖಚಿತವಾಗಿದೆ. ಮೇ 6ರಂದು ಬಂಗಾಳಕೊಲ್ಲಿಯಲ್ಲಿ ಈ ವರ್ಷದ ಮೊದಲ ಚಂಡಮಾರುತ ಸೃಷ್ಟಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದೆ.

ತೀವ್ರತರ ಬದಲಾವಣೆ ಸಾಧ್ಯತೆ
ಮುಂದಿನ 120 ಗಂಟೆಗಳವರೆಗೆ ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಬಂಗಾಳಕೊಲ್ಲಿಯ ವಾಯುಭಾರತ ಕುಸಿತ ಮೇ 6ರ ವರೆಗೆ ದಿನೇ ದಿನೆ ತೀವ್ರಗೊಳ್ಳುತ್ತಾ ಸಾಗಲಿದೆ. ಶನಿವಾರ ನಿಖರ ಚಂಡಮಾರುತವಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.


ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ತೀವ್ರತೆ ಹೆಚ್ಚಾದರೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಕೆಲವು ದಿನಗಳ ಕಾಲ ಧಾರಾಕಾರ ಮಳೆ ಬರಲಿದೆ ಎಂದು ಅಂದಾಜಿಸಲಾಗಿದೆ.