





ಮಂಗಳೂರು, ಮೇ, 30: ಕೇರಳ ರಾಜ್ಯಕ್ಕೆ ಜೂನ್ 4ರಂದು ಮುಂಗಾರು ಪ್ರವೇಶ ಆಗಲಿದೆ. ನಂತರ ರಾಜ್ಯಕ್ಕೂ ಮುಂದಿನ ಏಳೆಂಟು ದಿನದಲ್ಲಿ ಮುಂಗಾರು ಪ್ರವೇಶ ಆಗಲಿದೆ. ಇನ್ನು ಜೂನ್ 1ರಿಂದ ಭಾರೀ ಮಳೆ ಮುನ್ಸೂಚನೆ ಇರುವುದರಿಂದ, ಮತ್ತು ನಷ್ಟ ಅನುಭವಿಸಿದ ಹಿನ್ನೆಲೆ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ ಏರಲಾಗಿದೆ. ಇದರಿಂದ ಮೂರು ತಿಂಗಳುಗಳ ಕಾಲ ಮೀನುಗಾರಿಕೆಗೆ ವಿರಾಮ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಸಕ್ತ ಋತುವಿನ ಆರಂಭದಲ್ಲಿ ಸಮುದ್ರದಲ್ಲಿ ಹೇರಳ ಪ್ರಮಾಣದಲ್ಲಿ ಮತ್ಸ್ಯ ದೊರಕಿದ್ದರೂ, ಫೆಬ್ರವರಿ – ಮಾರ್ಚ್‌ನಲ್ಲಿಯೇ ಮತ್ಸ್ಯ ಕ್ಷಾಮ ತಲೆದೂರಿತ್ತು. ಪರಿಣಾಮ ಮೀನುಗಾರರು ಅವಧಿಗೆ ಮುನ್ನವೇ ಮೀನುಗಾರಿಕೆ ಸ್ಥಗಿತಗೊಳಿಸಿ ಬಂದರಿನಲ್ಲಿ ಲಂಗರು ಹಾಕಿದ್ದಾರೆ. ಈ ಪ್ರಸಕ್ತ ಋತುವಿನಲ್ಲಿ ಹೇರಳ ಪ್ರಮಾಣದಲ್ಲಿ ಮತ್ಸ್ಯ ದೊರಕಿತ್ತು. ಆದರೆ ದರ ಕುಸಿತದಿಂದ ಮೀನುಗಾರರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ ದೊರಕಿರಲಿಲ್ಲ.
ಇದರ ಪರಿಣಾಮ ಸಾಕಷ್ಟು ಮೀನು ದೊರಕಿದರೂ ಲಾಭವಿಲ್ಲದೆ ಮೀನುಗಾರರಯ ಸಂಕಷ್ಟಕ್ಕೆ ಒಳಗಾಗಿದ್ದರು. ಸಮುದ್ರದಲ್ಲಿ ಹೇರಳವಾಗಿದ್ದ ಮತ್ಸ್ಯ ಸಂಪತ್ತು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿಯೇ ಏಕಾಏಕಿ ಕುಸಿತಗೊಂಡಿದೆ. ಇದೀಗ ಮತ್ಸ್ಯ ಕ್ಷಾಮದಿಂದ ಸಂಕಷ್ಟಕ್ಕೊಳಗಾದ ಮೀನುಗಾರರು ಅವಧಿಗೆ ಪೂರ್ವದಲ್ಲೇ ದಡಕ್ಕೆ ಸೇರಿ ಬೋಟ್‌ಗಳನ್ನು ಲಂಗರು ಹಾಕಿದ್ದಾರೆ.


ಮೀನಿನ ಸಂತಾನೋತ್ಪತ್ತಿ ಪ್ರಕ್ರಿಯೆಗಾಗಿ ಸರ್ಕಾರದ ನಿಯಮದಂತೆ ಜೂನ್‌ನಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ಬೋಟ್‌ಗಳು ಲಂಗರು ಹಾಕುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಈ ಬಾರಿ ಈಗಾಗಲೇ ಶೇಕಡಾ 90ರಷ್ಟು ಬೋಟ್‌ಗಳು ಅವಧಿಗೆ ಮುನ್ನವೇ ಮಂಗಳೂರು ಬಂದರ್‌ನಲ್ಲಿ ಲಂಗರು ಹಾಕಿವೆ. ಅಲ್ಲದೆ ಇನ್ನಷ್ಟು ಬೋಟ್‌ಗಳು ಎರಡು ದಿನದಲ್ಲಿ ಲಂಗರು ಹಾಕಲಿವೆ. ಅಲ್ಲದೆ ಬೇಗನೇ ದಡದಲ್ಲಿ ಲಂಗರು ಹಾಕುವುದರಿಂದ ಬೋಟ್‌ಗಳು ಸುರಕ್ಷಿತ ಆಗಿರುತ್ತವೆ. ಕೊನೆಗೆ ಲಂಗರು ಹಾಕುವ ಬೋಟ್‌ಗಳು ಸಮುದ್ರದ ಅಲೆಗಳು ಒಡೆದು ಹಾನಿಗೀಡಾಗುತ್ತದೆ ಎಂಬ ನಂಬಿಕೆ ಬೋಟ್ ಮಾಲೀಕರಲ್ಲಿದೆ. ಆದ್ದರಿಂದ ಮಂಗಳೂರು ಬಂದರಿನಲ್ಲಿ ಹೊಸ ಜೆಟ್ಟಿಯನ್ನು ನಿರ್ಮಾಣ ಮಾಡಬೇಕೆಂಬ ಕೂಗು ಮೀನುಗಾರರಿಂದ ಕೇಳಿಬರುತ್ತಿದೆ.
ಪ್ರಸ್ತುತ ಒಂದು ಬೋಟ್‌ಗೆ 9,000 ಲೀಟರ್ ಡೀಸೆಲ್ ಸಬ್ಸಿಡಿ ದೊರೆಯುತ್ತದೆ. ಆದರೆ ಮೂರು ಬಾರಿ ಟ್ರಿಪ್ ಮಾಡಲು 18,000 ಲೀಟರ್ ಪೆಟ್ರೋಲ್ ಬೇಕಾಗುತ್ತದೆ. ಆದ್ದರಿಂದ ನೂತನ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಸದಾ ಜನಜಂಗುಳಿಯಿಂದ ಜಿನುಗುಡುತ್ತಿದ್ದ ಮಂಗಳೂರಿನ ಮೀನುಗಾರಿಕಾ ಬಂದರು ಇನ್ನು ಮೂರು ತಿಂಗಳು ಸ್ತಬ್ಧವಾಗಲಿದೆ. ಆರಂಭದಲ್ಲಿ ಬಂದ ಲಾಭ ಕೊನೆಗೆ ನಷ್ಟದಲ್ಲಿ ಮುಕ್ತಾಯವಾಗಿದ್ದು, ಈ ಬಾರಿಯೂ ಮತ್ತದೇ ನಿರೀಕ್ಷೆಯಲ್ಲಿ ಮೀನುಗಾರರು ತಮ್ಮ ಬೋಟ್‌ಗಳನ್ನು ಲಂಗರು ಹಾಕುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
- oneindia