
ವೇಣೂರು, ಎ. 25: ಇದುವರೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಕಂಡು ಬರುತ್ತಿತ್ತು. ಆದರೆ ಈ ಬಾರಿ ಅನಾವೃಷ್ಟಿ ಕಾಡಿದ್ದು, ಪರಿಣಾಮ ಬೇಸಿಗೆಯ ಬಿರುಬಿಸಿಲಿಗೆ ಸಿಲುಕಿ ಅಡಿಕೆ, ಕರಿಮೆಣಸು ಗಿಡಗಳು ಒಣಗುತ್ತಿವೆ.
ಇಂದು ಇದೀಗ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಪುತ್ತೂರು ಪರಿಸರದಲ್ಲಿ ಬರ್ಜರಿ ಸುರಿಯುತ್ತಿದೆ.
ನೀರಿಲ್ಲದೆ ಒಣಗಿದ ಅಡಿಕೆ ತೋಟ
ಇಷ್ಟರಲ್ಲೇ ದ.ಕ. ಜಿಲ್ಲೆಯಲ್ಲಿ ಒಂದೆರಡು ಬಾರಿಮಳೆ ಸುರಿಯಬೇಕಾಗಿತ್ತು. ಆದರೆ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆ ಬಾರದ ಕಾರಣದಿಂದಾಗಿ ಜಲಮೂಲಗಳು ಬತ್ತಿಹೋಗುತ್ತಿದ್ದು, ಅಲ್ಲಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇಲ್ಲಿ ಜನರು ನದಿ, ಬಾವಿ, ಬೋರ್ವೆಲ್ ಸೇರಿದಂತೆ ಜಲ ಮೂಲಗಳನ್ನು ನೀರಿಗಾಗಿ ಆಶ್ರಯಿಸಿದ್ದಾರೆ.
ಆದರೆ ಪಂಪ್ ಇಳಿಸಿದರೂ ತೋಟಕ್ಕೆ ಬಳಕೆ ಮಾಡುವಷ್ಟು ಹಲವು ರೈತರಿಗೆ ನೀರು ಬೋರ್ವೆಲ್ನಲ್ಲೂ ಲಭಿಸುತ್ತಿಲ್ಲ. ನದಿಯ ಮೂಲವನ್ನು ಆಶ್ರಯಿಸುತ್ತಿದ್ದ ಕೃಷಿಕರು ಇಂದು ಹಿಟಾಚಿ ಮೂಲಕವೂ ಗುಂಡಿ ತೆಗೆದರೂ ನೀರು ಕಂಡು ಬರುತ್ತಿಲ್ಲ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿದ್ದರಿಂದ ಜಲಮೂಲಗಳು ಚೇತರಿಕೆ ಕಾಣುತ್ತಿದ್ದವು. ಆದರೆ ಈ ಬಾರಿ ಅಲ್ಲಲ್ಲಿ ತುಂತುರು ಮಳೆ ಬಿದ್ದಿದೆ ಅಷ್ಟೇ.
ಮಳೆಗಾಲದಲ್ಲಿ ಭಾರಿ ಮಳೆಯ ಕಾರಣ ನೀರು ಸಂಗ್ರಹಾಗಾರ, ಕೆರೆ ಕಟ್ಟೆಗಳಲ್ಲಿ ಹೂಳು ತುಂಬಿದ್ದು, ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಇದರಿಂದಾಗಿ ಬೇಸಿಗೆಯಲ್ಲಿ ನೀರಿಗೆ ತೊಂದರೆ ಅನುಭವಿಸುವಂತಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬೇಸಿಗೆಯಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈ ಬಾರಿ ಜಿಲ್ಲೆಯ ಜನ ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಬಿಸಿಲಿಗೆ ಸಾಯುತ್ತಿರುವ ಅಡಿಕೆಗಿಡಗಳು
ಒಂದೆಡೆ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೆ, ಮತ್ತೊಂದೆಡೆ ಬಿಸಿಲಿನ ತಾಪಕ್ಕೆ ಅಡಿಕೆ, ಕರಿಮೆಣಸಿನ ಗಿಡಗಳು ಒಣಗುತ್ತಿವೆ. ಇಡೀ ತೋಟದಲ್ಲಿ ಒಂದು ಗಿಡ ಸತ್ತರೂ ಬೆಳೆಗಾರರು ಪರಿತಪಿಸಬೇಕಾಗುತ್ತದೆ. ಏಕೆಂದರೆ ಒಂದು ಅಡಿಕೆ ಗಿಡವನ್ನು ನೆಟ್ಟು ಅದು ಫಸಲು ಬಿಡಬೇಕಾದರೆ ಕನಿಷ್ಟ ನಾಲ್ಕೈದು ವರ್ಷ ಕಾಯಬೇಕಾಗುತ್ತದೆ. ಅಲ್ಲಿ ತನಕ ಅದಕ್ಕೆ ಗೊಬ್ಬರ ಹಾಕಿ ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ವರುಣ ಕೃಪೆ ತೋರಿದರಷ್ಟೇ ಇಲ್ಲಿಯ ಜನ ನೆಮ್ಮದಿಯುಸಿರು ಬಿಡಲು ಸಾಧ್ಯವಾಗಲಿದೆ.
