ವೇಣೂರು, ಎ. 13: ಬಜಿರೆ ಸ.ಉ.ಪ್ರಾ. ಶಾಲೆಗೆ ಹೊಸಕಟ್ಟಡ, ಸ್ಮಾರ್ಟ್‌ಲ್ಯಾಬ್, ಸ್ಮಾರ್ಟ್ ತರಗತಿಗಳು, ಸುಸಜ್ಜಿತ ಗ್ರಂಥಾಲಯ, ಕ್ರೀಡಾ ಕೊಠಡಿಯ ಜತೆ ಪ್ರೀ ಸ್ಕೂಲ್‌ನಿಂದ ದ್ವಿತೀಯ ಪಿಯುಸಿವರೆಗೆ ಶಿಕ್ಷಣ…..
ಹೌದು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾಗಿ ದೇಶದಾದ್ಯಂತ ಪ್ರಧಾನ ಮಂತ್ರಿಯವರ ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಯಡಿ ದ.ಕ. ಜಿಲ್ಲೆಯ ೮ ಶಾಲೆಗಳ ಪೈಕಿ ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಸ.ಉ.ಪ್ರಾ. ಶಾಲೆಯೂ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆ ಅನುಷ್ಠಾನವಾದರೆ ಬಜಿರೆ ಶಾಲೆ ಸ್ಮಾರ್ಟ್ ಆಗುವುದರಲ್ಲಿ ಸಂದೇಹವಿಲ್ಲ.
ಪ್ರಿ-ಸ್ಕೂಲ್‌ನಿಂದ ಪಿಯುಸಿವರೆಗೆ
ಪಠ್ಯಕ್ರಮದ ರಚನೆ ಮತ್ತು ಬೋಧನಾ ಶೈಲಿಯನ್ನು ವಿವಿಧ ಹಂತಗಳಾಗಿ ಈ ಯೋಜನೆಯಡಿ ವಿಂಗಡಿಸಲಾಗಿದೆ. ಅಡಿಪಾಯ, ಪೂರ್ವ ಸಿದ್ಧತೆ, ಮಧ್ಯಮ ಮತ್ತು ಮಾಧ್ಯಮಿಕ ಎಂಬ ವಿಭಾಗಗಳಾಗಿ ವಿಭಜಿಸಲಾಗಿದೆ. ಅಡಿಪಾಯದ ವರ್ಷಗಳು (ಪ್ರಿ-ಸ್ಕೂಲ್ ಮತ್ತು ೧, ೨ನೇ ತರಗತಿ) ಆಟದ ಆಧಾರಿತ ಕಲಿಕೆಯನ್ನು ಒಳಗೊಂಡಿರುತ್ತದೆ. ಪೂರ್ವಸಿದ್ಧತಾ ಹಂತದಲ್ಲಿ (೩ರಿಂದ ೫ನೇ ತರಗತಿ) ಕೆಲವು ಔಪಚಾರಿಕ ತರಗತಿಯ ಬೋಧನೆಯೊಂದಿಗೆ ಲಘು ಪಠ್ಯಪುಸ್ತಕಗಳನ್ನು ಪರಿಚಯಿಸಲಾಗುತ್ತದೆ. ಮಧ್ಯಮ ಹಂತದಲ್ಲಿ (೬ರಿಂದ ೮ನೇ ತರಗತಿ) ವಿಷಯ ಶಿಕ್ಷಕರನ್ನು ಪರಿಚಯಿಸಲಿದೆ. ಸೆಕೆಂಡರಿ ಹಂತದಲ್ಲಿ (೯ರಿಂದ ೧೨ನೇ ತರಗತಿ) ಕಲೆ, ವಿಜ್ಞಾನ ಮತ್ತು ಇತರ ವಿಷಯಗಳು ಒಳಗೊಂಡಿರುತ್ತದೆ.
ಆಯ್ಕೆ ಪ್ರಕ್ರಿಯೆ ಮತ್ತು ಪರಿವರ್ತನೆ
ಎಲ್ಲಾ ಜಿಲ್ಲೆಯಿಂದ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ ಆನ್‌ಲೈನ್ ಮೂಲಕ ಕೇಂದ್ರಕ್ಕೆ ಅಪ್‌ಲೋಡ್ ಮಾಡಲಾಗಿದೆ. ಕೇಂದ್ರದಿಂದ ಪರಿಶೀಲಿಸಿ, ಆಯಾ ಜಿಲ್ಲೆಗಳಲ್ಲಿ ಆಯ್ದ ಶಾಲೆಗಳನ್ನು ಆಯ್ಕೆ ಮಾಡಿ ಕೊಂಡಿವೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿ ತನಕ ಒಂದೇ ಸೂರಿನಡಿ ಬರುವಂತೆ ಹಂತಹಂತವಾಗಿ ಪರಿವರ್ತನೆಯಾಗಲಿದೆ.
ಆಯ್ಕೆ ಖುಷಿ ತಂದಿದೆ
ನಮ್ಮ ಬಜಿರೆ ಸ.ಉ.ಪ್ರಾ. ಶಾಲೆಯನ್ನು ಪಿಎಂಶ್ರೀ ಯೋಜನೆಗೆ ಆಯ್ಕೆ ಮಾಡಿರುವುದ ಖುಷಿ ತಂದಿದೆ. ಜಿಲ್ಲೆಯಲ್ಲೇ ಹಲವು ಮಾದರಿ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದ ಹೆಗ್ಗಳಿಕೆ ನಮ್ಮ ಶಾಲೆಗಿದೆ. ಈ ಎಲ್ಲಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಿದೆ.
- ಕಮಲಾಜಿ ಎಸ್. ಜೈನ್, ಮುಖ್ಯಶಿಕ್ಷಕಿ ಬಜಿರೆ ಶಾಲೆ