May 10, 2025
75


ವಿಶೇಷ ಸಂದರ್ಭಗಳ ಸ್ಮರಣಾರ್ಥವಾಗಿ ಸರ್ಕಾರ ನಾಣ್ಯ ಮತ್ತಿತರ ಕರೆನ್ಸಿ, ಅಂಚೆ ಚೀಟಿ ಇತ್ಯಾದಿ ಬಿಡುಗಡೆ ಮಾಡುವುದುಂಟು. ಈಗ 75 ವರ್ಷದ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ 75 ರೂ ನಾಣ್ಯ ಬಿಡುಗಡೆ ಆಗಿದೆ. ಈ ನಾಣ್ಯದ ವಿಶೇಷತೆ ಬಗ್ಗೆ ಇಲ್ಲಿದೆ ವಿವರ. ನವದೆಹಲಿ: ಕೇಂದ್ರ ರಾಜಧಾನಿ ನಗರಿಯಲ್ಲಿ ಹೊಸ ಸಂಸದೀಯ ಭವನದ ಉದ್ಘಾಟನೆ ಆಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 75 ರೂ ಮುಖಬೆಲೆಯ ನಾಣ್ಯ (Rs. 75 coin) ಹಾಗೂ ವಿಶೇಷ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಸಂಸತ್ ಭವನದ ಸ್ಮರಣಾರ್ಥ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ಮರಣಾರ್ಥ 75 ರೂ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಈ ನಾಣ್ಯ ಮಾರುಕಟ್ಟೆಯಲ್ಲಿ ಚಲಾವಣೆಗೆಂದು ತಯಾರಿಸಿದ್ದಾಗಿರುವುದಿಲ್ಲ. ಹಾಗಂತ ಇದು ಚಲಾವಣೆಗೆ ಅಸಿಂಧುವಂತೂ ಅಲ್ಲ. ಇದು ಸ್ಮರಣಾರ್ಥ ವಿಶೇಷ ನಾಣ್ಯವಾಗಿದೆ. ಹಿಂದೆ ಬಹಳಷ್ಟು ಸಂದರ್ಭಗಳಲ್ಲಿ ಈ ರೀತಿಯ ಸ್ಮರಣಾರ್ಥ ನಾಣ್ಯಗಳು ಬಿಡುಗಡೆ ಆಗಿದ್ದಿದೆ. ಮಾಹಿತಿ ಪ್ರಕಾರ 1947ರಿಂದೀಚೆ ಆರ್​ಬಿಐ ಈ ರೀತಿಯ 350ಕ್ಕೂ ಹೆಚ್ಚು ಸ್ಮಾರಕ ನಾಣ್ಯಗಳನ್ನು ಬಿಡುಗಡೆ ಮಾಡಿರುವುದು ತಿಳಿದುಬಂದಿದೆ.

75 ರೂ ವಿಶೇಷ ನಾಣ್ಯದ ವಿಶೇಷತೆಗಳೇನು?

ಸ್ವಾತಂತ್ರ್ಯದ ಅಮೃತಮಹೋತ್ಸವ ಸಂಸ್ಮರಣೆಯಲ್ಲಿ ತಯಾರಾಗಿರುವ 75 ರೂ ವಿಶೇಷ ನಾಣ್ಯವನ್ನು ಸಂವಿಧಾನದ ಮೊದಲ ಸ್ಕೆಡ್ಯೂಲ್​ನಲ್ಲಿ ನೀಡಲಾಗಿರುವ ಮಾರ್ಗಸೂಚಿ ಪ್ರಕಾರ ತಯಾರಿಸಲಾಗಿದೆ. ಇದು ವೃತ್ತಾಕಾರದಲ್ಲಿದ್ದು, ತುದಿಯಲ್ಲಿ 200 ಸೀಳುಗಳನ್ನು ಹೊಂದಿದೆ. ಇದರ ವ್ಯಾಸ 44 ಮಿಲಿಮೀಟರ್ ಇದೆ. ತೂಕ 35 ಗ್ರಾಮ್ ಇದೆ.

ಈ ನಾಣ್ಯವನ್ನು ಹೆಚ್ಚಾಗಿ ಬೆಳ್ಳಿ ಮತ್ತು ತಾಮ್ರ ಲೋಹಗಳಿಂದ ತಯಾರಿಸಲಾಗಿದೆ. ಶೇ. 50ರಷ್ಟು ಬೆಳ್ಳಿ, ಶೇ. 40ರಷ್ಟು ತಾಮ್ರ, ಶೇ. 5ರಷ್ಟು ನಿಕೆಲ್, ಶೇ. 5ರಷ್ಟು ಜಿಂಕ್ ಲೋಹಗಳ ಮಿಶ್ರಣದಿಂದ ಈ ನಾಣ್ಯವನ್ನು ತಯಾರಿಸಲಾಗಿದೆ.

ನಾಣ್ಯದ ಮುಂಭಾಗದಲ್ಲಿ ಮಧ್ಯದಲ್ಲಿ ಅಶೋಕ ಪಿಲ್ಲರ್ ಇದ್ದರೆ ಕೆಳಗೆ ದೇವನಾಗರಿಯಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ಎಡಗಡೆ ಭಾರತ್ ದೇವನಾಗರಿಯಲ್ಲಿ ಬರೆದರೆ, ಬಲಗಡೆ ಇಂಗ್ಲೀಷ್​ನಲ್ಲಿ ಇಂಡಿಯಾ ಎಂದಿದೆ.

75 ರೂ ನಾಣ್ಯದ ಹಿಂಭಾಗದಲ್ಲಿ ಹೊಸ ಸಂಸತ್ ಸಂಕೀರ್ಣದ ಫೋಟೋ ಇದೆ. ಮೇಲಿನ ಭಾಗದಲ್ಲಿ ದೇವನಾಗರಿಯಲ್ಲಿ ಸಂಸದ್ ಸಂಕುಲ್ ಎಂದರೆ ಬರೆಯಲಾದರೆ, ಕೆಳಭಾಗದಲ್ಲಿ ಇಂಗ್ಲೀಷ್​ನಲ್ಲಿ ಪಾರ್ಲಿಯಾಮೆಂಟ್ ಕಾಂಪ್ಲೆಕ್ಸ್ ಎಂಬ ಇನ್ಸ್​ಕ್ರಿಪ್ಷನ್ ಇರುತ್ತದೆ.

ಎಲ್ಲಿ ಸಿಗುತ್ತೆ 75 ರೂ ನಾಣ್ಯ? ಹೇಗೆ ಪಡೆಯುವುದು?

ಈ ಹಿಂದೆ ಹಲವಾರು ವಿಶೇಷ ಸಂದರ್ಭಗಳಿಗೆ ಸ್ಮರಣಾರ್ಥವಾಗಿ ಆರ್​ಬಿಐ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದ್ದಿದೆ. ಆದರೆ, ಇವು ಸಾರ್ವಜನಿಕವಾಗಿ ಲಭ್ಯ ಇರುವುದಿಲ್ಲ. ಕಡಿಮೆ ಬೆಲೆಯ ನಾಣ್ಯವಾದರೆ ಒಂದಷ್ಟು ಕಾಲ ಸಾರ್ವಜನಿಕ ಬಳಕೆಯಲ್ಲಿದ್ದು ನಂತರ ಮಾಯವಾಗುತ್ತದೆ. ಅಧಿಕ ಬೆಲೆಯ ನಾಣ್ಯಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವುದು ತೀರಾ ಅಪರೂಪ. ಇವು ಕಲೆಕ್ಷನ್ ವಸ್ತುವಾಗಿ ಬಳಕೆ ಆಗುತ್ತದೆ. ಇವುಗಳನ್ನು ಪಡೆಯಬೇಕೆಂದರೆ ಏಜೆನ್ಸಿಗಳ ಮೂಲಕ ಪ್ರಯತ್ನಿಸಬಹುದು.

ಕೇಂದ್ರ ಸರ್ಕಾರ ಸ್ವಾಮ್ಯದ ಮುಂಬೈ ಮಿಂಟ್, ಕೋಲ್ಕತಾ ಮಿಂಟ್, ಹೈದರಾಬಾದ್ ಮಿಂಟ್ ಮತ್ತು ನೋಯ್ಡಾ ಮಿಂಟ್​ಗಳು ಈ ನಾಣ್ಯಗಳನ್ನು ತಯಾರಿಸುತ್ತವೆ. ಇಂಥ ನಾಣ್ಯ ಬೇಕಾದವರು ಈ ಸಂಸ್ಥೆಗಳ ವೆಬ್​ಸೈಟ್​ಗೆ ಹೋಗಿ ಅಲ್ಲಿ ಪಡೆಯಲು ಯತ್ನಿಸಬಹುದು. ಅಥವಾ ಕಾಯಿನ್ ಡೀಲರ್​ಗಳ ಮೂಲಕ ನಾಣ್ಯ ಪಡೆಯಬಹುದು.

About The Author

Leave a Reply

Your email address will not be published. Required fields are marked *

<p>You cannot copy content of this page.</p>