ಮಂಗಳೂರು: ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆಂದು ಮನೆಯಿಂದ ತೆರಳಿದ್ದ ಸುಳ್ಯ ತಾಲೂಕು ಕೊಲ್ಲಮೊಗ್ರು ಗ್ರಾಮದ ಹಿಂದೂ ಯುವತಿಯೊಬ್ಬಳ ನಾಪತ್ತೆ ಪ್ರಕರಣ ಸಿನಿಮೀಯ ರೀತಿಯಲ್ಲಿ ಬಯಲಾಗಿದ್ದು, ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಲು ಯತ್ನಿಸಿದ್ದ ಆಕೆಯ ಪ್ಲ್ಯಾನ್ ಗೆ ಪೋಷಕರೇ ಬೆಚ್ಚಿಬಿದ್ದಿದ್ದಾರೆ.
ವಿದೇಶದಲ್ಲಿ ಓದುವ ನೆಪ, ಮನೆ ಬಿಟ್ಟ ಯುವತಿ..!ಸವಣೂರಿನ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳುವ ನೆಪವೊಡ್ಡಿದ 18ರ ಯುವತಿ ದೀಕ್ಷಾ ಮನೆಯಲ್ಲಿ ಪೋಷಕರನ್ನು ಕಥೆ ಕಟ್ಟಿ ನಂಬಿಸಿ ಕಳೆದ ಆಗಸ್ಟ್ 25 ರಂದು ಮನೆ ಬಿಟ್ಟಿದ್ದಳು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನನ್ನು ಹೊಂದಿರುವ ಮೂರು ಮಕ್ಕಳ ಪೋಷಕರಾಗಿರುವ ದೀಕ್ಷಾ ತಂದೆ ತಾಯಿ ಅವಿದ್ಯಾವಂತರಾದ ಕಾರಣ ಮಗಳು ಹೇಳುವ ಕಥೆಯನ್ನು ನಿಜವೆಂದೇ ನಂಬಿದ್ದರು.
ತನ್ನ ಜೊತೆ ಕಲಿತ ಇಬ್ಬರು ಸ್ನೇಹಿತೆಯರು ಬೆಂಗಳೂರಿನಲ್ಲಿದ್ದು, ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ತನ್ನನ್ನು ಬೀಳ್ಕೊಡಲು ಬಂದಿರುವುದಾಗಿಯೂ ಪೋಷಕರಿಗೆ ನಂಬಿಸಿದ್ದಳು. ಅದರಂತೆ ವಿಮಾನ ನಿಲ್ದಾಣದವರೆಗೂ ಗೆಳತಿಯರ ಜೊತೆ ಹೋದ ದೀಕ್ಷಾ ಬಳಿಕ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ ಗೆಳತಿಯರು ವಾಪಾಸ್ ಬಂದಿದ್ದರು. ವಿಚಿತ್ರ ಏನೆಂದರೆ ದೀಕ್ಷಾ ತನ್ನ ಗೆಳತಿಯರಿಗೆ ತನಗೆ ಅಪ್ಪ ಅಮ್ಮ ಇಲ್ಲವೆಂದೇ ಕಥೆ ಕಟ್ಟಿ ಅವರಿಂದ ಹಣದ ಸಹಾಯ ಪಡೆದಿದ್ದಳು ಎಂಬ ಮಾಹಿತಿಯೂ ಲಭಿಸಿದ್ದು, ಈ ಬಗ್ಗೆ ಖಚಿತತೆ ಸಿಕ್ಕಿಲ್ಲ.
ಬಸ್ ನಲ್ಲಿ ಅನ್ಯಕೋಮಿನ ಜೋಡಿ ಶಂಕೆ, ಚಾಣಾಕ್ಷತನ ಮೆರೆದ ಬಸ್ ನಿರ್ವಾಹಕ..!ದೀಕ್ಷಾ ಪೋಷಕರು ತಮ್ಮ ಮಗಳು ವಿದೇಶಕ್ಕೆ ಹೋದಳೆಂದು ನಂಬಿದ್ದರೆ, ವಿಮಾನ ನಿಲ್ದಾಣದಲ್ಲಿ ಸವಣೂರು ಮೂಲದ ಮುಸ್ಲಿಂ ಯುವಕನ ಜೊತೆ ಸೇರಿದ ದೀಕ್ಷಾ ಬಳಿಕ ವಿಮಾನ ನಿಲ್ದಾಣದಿಂದ ಹೊರಬಂದು ವಾಪಾಸ್ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಳು. ಆದರೆ ಆ ಬಸ್ ನ ನಿರ್ವಾಹಕ ಅನುಮಾನಗೊಂಡು ಆತ ಯುವತಿಯ ಫೋಟೋ ತೆಗೆದು ಹಿಂದೂ ಸಂಘಟನೆಯ ಯುವಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅದು ಪುತ್ತೂರಿನ ಹಿಂದೂ ಸಂಘಟನೆಗಳಿಗೂ ಮಾಹಿತಿ ಹೋಗಿತ್ತು.
ಬಳಿಕ ಯುವತಿಯ ಫೋಟೋ ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿರುವ ಯುವತಿ ಕೊಲ್ಲಮೊಗ್ರಿನ ದೀಕ್ಷಾ ಎಂಬುದು ಗೊತ್ತಾಗುತ್ತಿದ್ದಂತೆ ಆಕೆಯ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು.
ಜಾಣ್ಮೆ ಮೆರೆದ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಇತ್ತ ಪೋಷಕರಿಗೆ ತಮ್ಮ ಮಗಳು ವಿದೇಶಕ್ಕೆ ತೆರಳದಿರುವುದು ಖಚಿತವಾಗುತ್ತಿದ್ದಂತೆ ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿ ಕಾರ್ತಿಕ್ ಅವರನ್ನು ಸಂಪರ್ಕಿಸಿದ್ದು, ದೀಕ್ಷಾಳ ಮೊಬೈಲ್ ಲೊಕೇಷನ್ ಆಧಾರದಲ್ಲಿ ಆಕೆ ಬೆಂಗಳೂರಿನ ಹೊರವಲಯದಲ್ಲಿ ಇರುವ ಬಗ್ಗೆ ತಿಳಿದುಬಂದಿತ್ತು.
ಈ ಸಮಯದಲ್ಲಿ ಜಾಣ್ಮೆ ಮೆರೆದ ಸಬ್ ಇನ್ಸ್‌ಪೆಕ್ಟರ್ ಕಾರ್ತಿಕ್ ಅವರು ಇಲ್ಲಿಂದ ಬೆಂಗಳೂರಿಗೆ 550km ದೂರವಿರುವ ಕಾರಣ ಕೂಡಲೇ ಬೆಂಗಳೂರಿನ ಪೋಲಿಸ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದು, ಅಲ್ಲಿ ದೂರು ದಾಖಲಿಸಿಕೊಳ್ಳದೇ ಇದ್ದರೆ ತಾನೇ ಖುದ್ದಾಗಿ ಪ್ರಕರಣ ದಾಖಲಿಸಿಕೊಳ್ಳುವ ಭರವಸೆ ನೀಡಿದ್ದರು. ಆದರೆ ಬಳಿಕ ದೀಕ್ಷಾ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಪೋಷಕರ ಚಿಂತೆಗೆ ಕಾರಣವಾಗಿತ್ತು.
ನಂತರ ಬೆಂಗಳೂರಿಗೆ ತೆರಳಿದ ದೀಕ್ಷಾ ಪೋಷಕರು ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ಕಳೆದ 28ರಂದು ದೂರು ನೀಡಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಉಪ್ಪಾರಪೇಟೆ ಪೋಲಿಸ್ ಠಾಣೆಗೆ ಕರೆತಂದಿದ್ದು, ನಾಳೆ ದೀಕ್ಷಾಳನ್ನು ಸುಬ್ರಹ್ಮಣ್ಯಕ್ಕೆ ಕರೆತರುವ ಮಾಹಿತಿ ಲಭಿಸಿದೆ.