

“ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗೆ ಮುಂಚಿತವಾಗಿ ಚುನಾವಣಾ ರಾಜಕೀಯವನ್ನು ತೊರೆವುದಾಗಿ ತೆಗೆದುಕೊಂಡಿರುವ ನಿರ್ಧಾರದಿಂದ ನಾನು ಹಿಂದೆ ಸರಿಯುವುದಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದು, “ಇದು ನನ್ನ ನಿರ್ಧಾರವಾಗಿದ್ದು, ಯಾರ ಒತ್ತಾಯವೂ ಇಲ್ಲ” ಎಂದಿದ್ದಾರೆ.
ಎನ್‌ಡಿಟಿವಿ ಜೊತೆಯಲ್ಲಿ ಮಾತನಾಡಿರುವ ಅವರು, “ನಾನು ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ, ನಾನು ದಣಿದಿಲ್ಲ, ನಾನು ಪ್ರಚಾರ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ, ನಾನು ರಾಜ್ಯ ಪ್ರವಾಸ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
“ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುತ್ತದೆ, ಚುನಾವಣಾ ರಾಜಕೀಯ ತ್ಯಜಿಸುವುದು ನನ್ನ ನಿರ್ಧಾರವಾಗಿತ್ತು. ಯಾರೂ ನನ್ನನ್ನು ಬಲವಂತಪಡಿಸಲಿಲ್ಲ. ನಾನು ಈ ನಿರ್ಧಾರವನ್ನು ಏಕೆ ತೆಗೆದುಕೊಂಡೆ ಎಂಬುದನ್ನು ನಾನು ಜನರಿಗೆ ಮನವರಿಕೆ ಮಾಡುತ್ತೇನೆ” ಎಂದು ಹೇಳಿದ್ದಾರೆ.
“ಬಸವರಾಜ ಬೊಮ್ಮಾಯಿಯವರಿಗೆ ಅಧಿಕಾರವನ್ನು ನೀಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಚುನಾವಣಾ ರಾಜಕೀಯದಲ್ಲಿ ನನ್ನ ಅನುಪಸ್ಥಿತಿಯು ಒಂದು ಸವಾಲು. ಬಿಜೆಪಿ ಈ ಸವಾಲುಗಳನ್ನು ಎದುರಿಸಬೇಕಾಗಿದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ” ಎಂದು ಪುನರುಚ್ಚರಿಸಿದ್ದಾರೆ.
ಟಿಪ್ಪು ವರ್ಸಸ್ ಸಾವರ್ಕರ್ ನಡುವಿನ ಚುನಾವಣೆ ಇದೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿರುವ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಎಸ್‌ವೈ, “ಇದಕ್ಕೆ ನನ್ನ ಒಪ್ಪಿಗೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಟಿಪ್ಪು ವರ್ಸಸ್ ಸಾವರ್ಕರ್ ಎಂಬ ನಿರೂಪಣೆಗೆ ನನ್ನ ಒಪ್ಪಿಗೆ ಇಲ್ಲ. ಇದು ಟಿಪ್ಪು ವರ್ಸಸ್ ಸಾವರ್ಕರ್ ಎಂದಾಗಬಾರದು. ಬಿಜೆಪಿಯ ನೀತಿಗಳು ಮತ್ತು ಯೋಜನೆಗಳು ನಿರೂಪಣೆಗಳನ್ನು ಕಟ್ಟಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಭ್ರಷ್ಟ ನಾಯಕರು, ಬಿಜೆಪಿ ವಿರುದ್ಧ ಅವರು ಮಾಡುವ ಭ್ರಷ್ಟಾಚಾರದ ಆರೋಪಗಳಿಗೆ ಅರ್ಥವಿಲ್ಲ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಕರ್ನಾಟಕ ವಿಧಾನಸಭೆಯಲ್ಲಿ ‘ವಿದಾಯ ಭಾಷಣ’ ಮಾಡಿದ್ದ ಅವರು, “ಪಕ್ಷವನ್ನು ಕಟ್ಟಲು ಮತ್ತು ತನ್ನ ಕೊನೆಯ ಉಸಿರು ಇರುವವರೆಗೂ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ” ಎಂದಿದ್ದರು.