ಬೆಂಗಳೂರು : ದೇವರು ಕಣ್ಣು ಬಿಡುವುದು, ದೇವರು ಪ್ರತ್ಯಕ್ಷವಾಗಿ ಭಕ್ತರ ಕಣ್ಣಿಗೆ ಕಾಣಿಸಿಕೊಳ್ಳುವುದು..ಇವನ್ನೆಲ್ಲಾ ಸಿನಿಮಾದಲ್ಲಿ ನಾವು ನೋಡುತ್ತಿರುತ್ತೇವೆ, ಆದರೆ ಪವಾಡ ಎಂಬಂತೆ ಶಿವಲಿಂಗ ಕಣ್ಣು ಬಿಟ್ಟು ಭಕ್ತರಲ್ಲಿ ಅಚ್ಚರಿ ಮೂಡಿಸಿರುವ ಸುದ್ದಿ ರಾಮನಗರದಲ್ಲಿ ಹರಡಿದೆ.
ಹೌದು, ರಾಮನಗರ ಜಿಲ್ಲೆಯ ಮಾಗಡಿ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪವಿರುವ ಪುರಾತನ ಕಾಲದ ಉಮಾಮಹೇಶ್ವರಿ ದೇಗುಲದಲ್ಲಿ ಇಂತಹದ್ದೊಂದು ಪವಾಡ ನಡೆದಿದೆ. ಸಂಜೆ ವೇಳೆಗೆ ಪೂಜೆ ಸಮಯದಲ್ಲಿ ಶಿವಲಿಂಗದ ಮೇಲ್ಬಾಗದಲ್ಲಿ ಕಣ್ಣುಗಳ ಆಕಾರ ಕಾಣಿಸಿಕೊಂಡು , ಸ್ವಲ್ಪ ಸಮಯದ ನಂತರ ಕಣ್ಣು ಮುಚ್ಚಿದೆ ಎನ್ನಲಾಗಿದೆ.
ಇನ್ನೂ ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನರು ದೇವರ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಸುತ್ತಮುತ್ತಲಿನ ಊರಿನ ಜನರು ದೇವಾಲಯಕ್ಕೆ ದೌಡಾಯಿಸಿದ್ದು,ಶಿವ ಲಿಂಗ ದರ್ಶನಕ್ಕೆ ಬಂದಿದ್ದಾರೆ. ಇನ್ನೂ, ದೇವಾಲಯದಲ್ಲಿ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಶಿವಲಿಂಗ ಕಣ್ಣು ಬಿಟ್ಟ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಾ. ರಾಜ್ ಕುಮಾರ್ ನಟನೆಯ ಬೇಡರ ಕಣ್ಣಪ್ಪ ಚಿತ್ರದಲ್ಲಿ ಶಿವಲಿಂಗಕ್ಕೆ ಕಣ್ಣು ಬಂದಿದ್ದನ್ನು ನಾವು ನೋಡಿದ್ದೇವೆ, ಆದರೆ ದೇವಾಲಯದಲ್ಲಿ ನಡೆದ ವಿಚಾರ ಹಲವು ಚರ್ಚೆಗೆ ಕಾರಣವಾಗಿದೆ.