

ಮಂಗಳೂರು: ಜು.26ರ ಇಂದು ನಿಗದಿಯಾಗಿದ್ದ ಮಂಗಳೂರು ವಿಶ್ವ ವಿದ್ಯಾಲಯದ ಪದವಿ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯಲಿದೆ ಎಂದು ವಿಶ್ವವಿದ್ಯಾಲಯದಿಂದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ‘ಬುಧವಾರದ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮಳೆಯ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನಾನುಕೂಲತೆ ಇದ್ದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು’ ಎಂದು ವಿವಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ನಡುವೆ ಮಂಗಳವಾರದಂದು ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಡಿಗ್ರಿ ಕಾಲೇಜು ತನಕ ರಜೆ ಘೋಷಣೆ ಮಾಡಿದ ಪರಿಣಾಮ ಜು. 25ರ ಪರೀಕ್ಷೆಗಳನ್ನು ಮುಂದೂಡಿತ್ತು. ಮುಂದೂಡಲಾದ ಪರೀಕ್ಷೆಗಳ ಪರಿಸ್ಕೃತ ದಿನಾಂಕ ಮುಂದೆ ಪ್ರಕಟಿಸುವ ಸೂಚನೆ ವಿವಿ ಕೊಟ್ಟಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಮಳೆ ಮುಂದುವರಿದ ಕಾರಣ ಜಿಲ್ಲೆಯಲ್ಲಿ ಪದವಿ ಪೂರ್ವ ಹಂತದವರೆಗೆ ಶಾಲೆ- ಕಾಲೇಜುಗಳಿಗೆ ಇಂದು (ಜುಲೈ 26) ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು, ಸರ್ಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಐ.ಟಿ.ಐಗಳಿಗೆ ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.