ನೊಯ್ಡಾ: ಸ್ವಲ್ಪ ದಿನ ಸುದ್ದಿಯಿಂದ ದೂರವಿದ್ದ ಸೀಮಾ ಹೈದರ್ ಈಗ ಮತ್ತೆ ಚರ್ಚೆಗೆ ಬಂದಿದ್ದಾರೆ. ತನ್ನ ಬೆಂಬಲಿಗರಿಗೆ ಸೀಮಾ ಹೈದರ್ ಖುಷಿ ಸುದ್ದಿಯನ್ನು ನೀಡಿದ್ದಾರೆ.
ಪಬ್ ಜೀ ಗೇಮ್ ನಲ್ಲಿ ಪರಿಚಯವಾದ ಸ್ನೇಹಿತನನ್ನು ವರಿಸಲು ಪತಿಯನ್ನು ತೊರೆದು ಕಳೆದ ವರ್ಷ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದು, ಗ್ರೇಟರ್ ನೋಯ್ಡಾದಲ್ಲಿ ತನ್ನ ಪ್ರಿಯಕರನೊಂದಿಗೆ ನೆಲೆಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಇದೀಗ ಗರ್ಭಿಣಿಯಾಗಿದ್ದಾರೆ.
ಈ ಬಗ್ಗೆ ಖುಷಿಯ ವಿಚಾರವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ತಾನು ಗರ್ಭಿಣಿ ಎಂಬ ವಿಚಾರವನ್ನು ಪತಿ ಸಚಿನ್ ಮೀನಾ ಮತ್ತು ಫಾಲೋವರ್ಸ್ ಗೆ ಹೇಳಿದ್ದಾರೆ. ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಗ್ರೇಟರ್ ನೋಯ್ಡಾಕ್ಕೆ ಅಕ್ರಮವಾಗಿ ಓಡಿ ಬಂದಿರುವ ಸೀಮಾ ಹೈದರ್ ಈಗ ಐದನೇ ಬಾರಿ ಗರ್ಭಿಣಿಯಾಗಿದ್ದಾರೆ. ಸೀಮಾ 7 ತಿಂಗಳ ಗರ್ಭಿಣಿ ಪ್ರೆಗ್ನೆನ್ಸಿ ಕಿಟ್ ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸೀಮಾ ತಮ್ಮ ಗರ್ಭಧಾರಣೆಯನ್ನು ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಕೋಬಾಬಾದ್ ಮೂಲದ ಸೀಮಾ ಹೈದರ್ ಸಂದರ್ಶನ ವೊಂದರಲ್ಲಿ ‘ತಾನು ಹಿಂದು ಧರ್ಮವನ್ನು ಸ್ವೀಕರಿಸಿದ್ದೇನೆ. ತಾಯ್ನಾಡಿಗೆ (ಪಾಕಿಸ್ತಾನ) ಮರಳಲು ಇಷ್ಟವಿಲ್ಲ. ತನ್ನ ನಾಲ್ಕು ಮಕ್ಕಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ’ ಎಂದು ಹೇಳಿದ್ದರು. ಭಾರತೀಯ ಪೌರತ್ವವನ್ನು ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಈ ಹಿಂದೆ ಪತ್ರ ಬರೆದಿದ್ದರು.
ಭಾರತೀಯ ಪ್ರಜೆ ಸಚಿನ್ ಮೀನಾ ಹಾಗೂ ಪಾಕಿಸ್ತಾನ ಮೂಲದ ಸೀಮಾ ಹೈದರ್ 2019ರಲ್ಲಿ ಪಬ್ ಜಿ ಆನ್ ಲೈನ್ ಗೇಮಿಂಗ್ ಪ್ಲಾಟ್ ಫಾರ್ಮ್ ಮೂಲಕ ಪರಿಚಯವಾಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ಸೀಮಾ ಹೈದರ್ ಗಂಡ ಗುಲಾಮ್ ಹೈದರ್ ನನ್ನು ತೊರೆದು ತನ್ನ ನಾಲ್ಕು ಮಕ್ಕಳೊಂದಿಗೆ ಮೇ 2023ರಲ್ಲಿ ಪಾಕಿಸ್ತಾನದ ತಮ್ಮ ಕರಾಚಿ ನಿವಾಸದಿಂದ ನೇಪಾಳಕ್ಕೆ ತೆರಳಿ, ಅಲ್ಲಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದರು.