ಉಡುಪಿ: ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣಮಠ, ಪರ್ಯಾಯ ಪುತ್ತಿಗೆ ಮಠದಿಂದ ನಡೆಯುತ್ತಿರುವ ಶ್ರೀಕೃಷ್ಣ ಮಾಸೋತ್ಸವ, ಸಪ್ತೋತ್ಸವದ ಪ್ರಯುಕ್ತ ಗೀತಾ ಮಂದಿರದಲ್ಲಿ 108 ಬಗೆಯ ಲಡ್ಡುಗಳನ್ನು ಒಳಗೊಂಡ ಲಡ್ಡುತ್ಸವ ಅದ್ದೂರಿಯಾಗಿ ನಡೆಯಿತು. ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು 108 ಬಗೆಯ ಲಡ್ಡುಗಳನ್ನು ಶ್ರೀ ಕೃಷ್ಣನಿಗೆ ಅರ್ಪಿಸಿ, ಮಂಗಳಾರತಿ ಬೆಳಗಿದರು. ಅನಂತರ ಗೀತಾಮಂದಿರದ ಮೊದಲ ಮಹಡಿಯಲ್ಲಿ ರೂಪಿಸಿದ್ದ 3ಡಿ ಪ್ರಿಂಟಿಂಗ್‌ನಲ್ಲಿರುವ ಕ್ಷೀರ ಸಾಗರದಲ್ಲಿ ಶ್ರೀ ಕೃಷ್ಣನ ರೂಪವನ್ನು ಶ್ರೀಪಾದರು ಅನಾವರಣಗೊಳಿಸಿದರು. ಗೀತಾ ಮಂದಿರದ ನೆಲಮಹಡಿಯಲ್ಲಿ ಬೃಹತ್ ಲಡ್ಡು ಕಲಾಕೃತಿಯ ಎದುರು ಯತಿತ್ರಯರು ದೀಪ ಬೆಳಗಿಸಿ ಲಡ್ಡುತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.