
ಮಂಗಳೂರಿನ ಮೂಡುಬಿದಿರೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದ.ಕ ಜಿಲ್ಲೆಯ ಮೂಡಬಿದ್ರೆಯ ರಾಜೀವ ಗಾಂಧಿ ಸಂಕೀರ್ಣದ ಎದುರು ಆ.22 ಘಟನೆ ನಡೆದಿತ್ತು. ವಿದ್ಯಾರ್ಥಿನಿ ಜೊತೆ ಮಾತನಾಡಿದ ಅನ್ಯಮತೀಯ ವಿದ್ಯಾರ್ಥಿಯ ಮೇಲೆ ಯುವಕರ ತಂಡವೊಂದು ನೈತಿಕ ಪೊಲೀಸ್ ಗಿರಿ ನಡೆಸಿದೆ. ಇದೀಗ ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ, ಅಭಿಲಾಷ್, ಪ್ರೇಮ್ ಭಂಡಾರಿ ಮತ್ತು ಸಂಜಯ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೂಡುಬಿದಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಬೆಂಗಳೂರಿಗೆ ಹೋಗಲು ಬಂದಿದ್ದಳು. ಅದೇ ಸಮಯದಲ್ಲಿ ಆಗಮಿಸಿದ್ದ ಕೋಟೆಬಾಗಿಲು ಸಮೀಪದ ವಿದ್ಯಾರ್ಥಿ ಹುಡುಗಿಯೊಂದಿಗೆ ಮಾತನಾಡಿದ್ದಾನೆ ಎಂಬ ನೆಪವೊಡ್ಡಿ ಯುವತಿ ಬಸ್ ಹತ್ತಿದ ಬಳಿಕ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮೂವರನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
