ಇಡೀ ವಿಶ್ವದಲ್ಲಿ ಶಾಂತಿ ಮತ್ತು ಸದ್ಭಾವನೆಯ ನಿರ್ಮಾಣ ಹಾಗೂ ಸಮುದಾಯಕ್ಕೆ ಮಾನವೀಯ ಸೇವೆಯನ್ನು ಒದಗಿಸುವ ಒಂದು ಅಂತಾರಾಷ್ಟ್ರೀಯ ಸ್ವಯಂಸೇವಾ ಸಂಘಟನೆಯೇ ‘ರೋಟರಿ’. ಸಾರ್ಥಕ 118 ವರ್ಷಗಳಿಂದ ಜಗತ್ತಿನ ಪ್ರತಿಯೊಂದು ಮಗುವೂ ಆಹಾರ, ಆರೋಗ್ಯ, ಶುದ್ಧ ಕುಡಿಯುವ ನೀರು, ಶಿಕ್ಷಣ ಮತ್ತು ಆರ್ಥಿಕ ಸಬಲತೆಯಿಂದ ವಂಚಿತವಾಗಬಾರದು ಎಂಬ ನೆಲೆಯಲ್ಲಿ ರೋಟರಿಯು ಮಾನವೀಯ ಕಳಕಳಿಯಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ವಿಶ್ವದಾದ್ಯಂತ ಶಾಂತಿ, ಸಮಾನತೆ ಮತ್ತು ಸಾಮರಸ್ಯ ಹಾಗೂ ಆರ್ಥಿಕ ಸಮತೋಲನದ ಸದೃಢ ಸಮಾಜ ನಿರ್ಮಾಣವೇ ರೋಟರಿಯ ಗುರಿಯಾಗಿದೆ.
ರೋಟರಿ ಪ್ರತಿಷ್ಠಾನ : ಅಂದು ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿದ್ದ ಆರ್ಚ್ ಸಿ. ಕ್ಲಂಪ್‌ರವರ ಮನದಾಳದಲ್ಲಿ ಮೊಳಕೆಯೊಡೆದ ದೂರಗಾಮಿ ದೃಷ್ಟಿಕೋನದ ಅದ್ಭುತ ಸಂಕಲ್ಪದ ಫಲವೇ ರೋಟರಿ ಪ್ರತಿಷ್ಠಾನ. ಕಳೆದ ನೂರು ವರ್ಷಗಳಲ್ಲಿ ಪ್ರತಿಷ್ಠಾನವು 3 ಬಿಲಿಯನ್ ಡಾಲರ್‌ಗಳಿಗೂ ಹೆಚ್ಚು ಮೊತ್ತವನ್ನು ಜಗತ್ತಿನಾದ್ಯಂತ ವಿವಿಧ ಜನಜೀವನ ಪರಿವರ್ತನೆಯ ಶಾಶ್ವತ ಯೋಜನೆಗಳಿಗಾಗಿ ವ್ಯಯಿಸಿದೆ. ರೋಟರಿ ಫೌಂಡೇಶನ್ ನ ಮೂಲಕ ಮಿಲಿಯಾಂತರ ಕೋಟಿ ಡಾಲರ್ ಹಣವನ್ನು ವ್ಯಯಿಸಿ ಮನುಕುಲದ ಮಾರಕ ರೋಗವಾದ ಪೋಲಿಯೋವನ್ನು ಜಗತ್ತಿನಿಂದಲೇ ನಿರ್ಮೂಲನ ಮಾಡಿ ವಿಶ್ವವನ್ನು ಪೋಲಿಯೋ ಮುಕ್ತವನ್ನಾಗಿರಿಸಿರುವಲ್ಲಿ ರೋಟರಿಯ ಸಾಧನೆ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ.
ಪ್ರತೀ ವರ್ಷ ಒಟ್ಟು 70 ಮಿಲಿಯನ್ ಡಾಲರ್ ಮೊತ್ತದ ಸರಾಸರಿ 1100 ಜಾಗತಿಕ ಅನುದಾನವನ್ನು ಬಿಡುಗಡೆಗೊಳಿಸುತ್ತದೆ. ರೋಟರಿ ಪ್ರತಿಷ್ಠಾನ (ದಿ ರೋಟರಿ ಫೌಂಡೇಶನ್) ವಿಶ್ವದ ಕೆಲವೇ ಕೆಲವು ಬೃಹತ್ ಹಾಗೂ ಪ್ರತಿಷ್ಟಿತ ಪ್ರತಿಷ್ಠಾನಗಳಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ‘ಅತ್ಯಂತ ಪಾರದರ್ಶಕ ಪ್ರತಿಷ್ಠಾನ’ ಎಂದು ನಾಲ್ಕು ತಾರಾ ಶ್ರೇಣಿಯ ಅಂತಾರಾಷ್ಟ್ರೀಯ ವಿಶ್ವಾಸವನ್ನು ಗಳಿಸಿದೆ.
ಅಂತಾರಾಷ್ಟ್ರೀಯ ರೋಟರಿಯ ಒಂದು ಘಟಕವಾದ ರೋಟರಿ ಉಡುಪಿಯು ತನ್ನ ಸುತ್ತಲಿನ ಪರಿಸರದ ಸಮಾಜದಲ್ಲಿ ಸಾಮರಸ್ಯಕ್ಕೆ ಒತ್ತು ಕೊಡುತ್ತಾ, ನಿತ್ಯನಿರಂತರ ಸಮುದಾಯ ಸೇವಾ ಚಟುವಟಿಕೆಗಳಿಂದ ಸಾರ್ವಜನಿಕ ವಿಶ್ವಾಸಕ್ಕೆ ಪಾತ್ರವಾಗಿದೆ. ರೋಟರಿ ಜಾಗತಿಕ ಅನುದಾನದ ಮೂಲಕ ಕೋಟ್ಯಾಂತರ ಮೊತ್ತದ ಶಾಲಾ ಶೈಕ್ಷಣಿಕ ಬೆಂಬಲ ಯೋಜನೆ, ಶೌಚಾಲಯ ನಿರ್ಮಾಣ, ಕಂಪ್ಯೂಟರ್‌ಗಳು ಹಾಗೂ ಪೀಠೋಪಕರಣಗಳ ಕೊಡುಗೆ, ಜಿಲ್ಲಾ ಸರಕಾರಿ ಆಸ್ಪತ್ರೆಗೆ ಜನರೇಟರ್ ಮತ್ತು ರಕ್ತವರ್ಗೀಕರಣ ಘಟಕಗಳ ನಿರ್ಮಾಣ, ವಿಶೇಷ ಮಕ್ಕಳ ಶಾಲೆಗೆ ವಿವಿಧ ಪರಿಕರ ಮತ್ತು ಶಾಲಾ ವಾಹನಗಳ ಕೊಡುಗೆ ಇತ್ಯಾದಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ಸಾರ್ವತ್ರಿಕ ಘನತೆಗೆ ಪಾತ್ರವಾಗಿದೆ.
ಗುರುಕುಲ ಪದ್ಧತಿಯ ಶಿಕ್ಷಣ ವ್ಯವಸ್ಥೆಯ ಮುಂದುವರಿದ ಭಾಗವಾಗಿ ಕಳೆದ ನೂರೈವತ್ತು (150) ವರ್ಷಗಳಿಂದ ಉಡುಪಿ ಕಡಿಯಾಳಿ ಪರಿಸರದಲ್ಲಿ ಗುಣಮಟ್ಟದ ಪ್ರಾಥಮಿಕ ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನೀಡುತ್ತಾ ಜನಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತ ಸಂಸ್ಥೆ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ. ಶ್ರೀ ಅದಮಾರು ಮಠದ ಕೀರ್ತಿಶೇಷ ಪೂಜನೀಯ ಶ್ರೀ ವಿಬುಧೇಶ ತೀರ್ಥರು, ಮಣಿಪಾಲದ ಖ್ಯಾತಿವೆತ್ತ ದಿ. ಕೆ.ಕೆ.ಪೈಯವರು, ಮಾಜಿ ಶಾಸಕ ದಿ, ಕರಂಬಳ್ಳಿ ಸಂಜೀವ ಶೆಟ್ಟಿಯವರು, ಸಾಹಿತ್ಯಿಕ, ಸಾಂಸ್ಕೃತಿಕ ದಿಗ್ಗಜರಾಗಿದ್ದ ದಿ. ಕು ಶಿ ಹರಿದಾಸ ಭಟ್ಟರು, ಮಾಜಿ ಸಚಿವ ದಿ ಡಾ ವಿ ಎಸ್ ಆಚಾರ್ಯರು ಮುಂತಾದ ಸಾಧಕ ಶ್ರೇಷ್ಟರಿಗೆ ವಿದ್ಯಾದಾನ ಮಾಡಿದ ಕೀರ್ತಿ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಗೆ ಸಲ್ಲುತದೆ.
ಪ್ರಸ್ತುತ ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟಿರುವ ಈ ಶಾಲೆಯ ಗೌರ್ವಾನ್ವಿತ ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾಂದಗಳವರು ಆಧುನಿಕ ತಂತ್ರಜ್ಞಾನದೊಂದಿಗೆ ವಿಶೇಷ ಸೌಕರ್ಯಗಳನ್ನು ಒದಗಿಸಿ ಕಡಿಯಾಳಿ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಪೂಜ್ಯರ ಈ ಯೋಜನೆಗೆ ರೋಟರಿ ಉಡುಪಿಯು ಸಹಯೋಗವನ್ನು ಒದಗಿಸಿದೆ.
ರೋಟರಿ ಉಡುಪಿಯಿಂದ ಗ್ಲೋಬಲ್ ಗ್ರ್ಯಾಂಟ್ ಮೂಲಕ ಕಡಿಯಾಳಿ ಶಾಲೆಗೆ ಹ್ಯಾಪಿ ಸ್ಕೂಲ್ ಪ್ರೊಜೆಕ್ಟ್ ಅಡಿಯಲ್ಲಿ ವಿವಿಧ ಸವಲತ್ತುಗಳ ಹಸ್ತಾಂತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರೂಪಾಯಿ 44 ಲಕ್ಷ ಮೌಲ್ಯದ ಸ್ಮಾರ್ಟ್ ಕ್ಲಾಸ್‌ಗಳು, ಪೀಠೋಪಕರಣಗಳು, ಕಂಪ್ಯೂಟರ್‌ಗಳು, ಪ್ರೊಜೆಕ್ಟರುಗಳು ನೀರು ಶೇಕರಣಾ ಬೃಹತ್ ಟ್ಯಾಂಕುಗಳ ಜತೆಗೆ ಶುದ್ಧ ಕುಡಿಯುವ ನೀರಿನ ಘಟಕ, ದೃಶ್ಯ ಮತ್ತು ಶ್ರಾವ್ಯ ವಿಭಾಗದ ಉಪಕರಣಗಳು, ಹುಡುಗಿಯರು ಮತ್ತು ಹುಡುಗರಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಇತ್ಯಾದಿ ಕೊಡುಗೆಗಳನ್ನು ರೋಟರಿ ಗ್ಲೋಬಲ್ ಗ್ರ್ಯಾಂಟ್ ಯೋಜನೆಯಡಿಯಲ್ಲಿ ಅಮೇರಿಕಾದ ರೋಸೆಂಟ್ ರೋಟರಿ ಕ್ಲಬ್ ರೋಟರಿ ಜಿಲ್ಲೆ 6060, ಸೆಂಟ್ರಲ್ ಚೆಸ್ಟರ್ ಕೌಂಟಿ, ರೋಟರಿ ಜಿಲ್ಲೆ 7450, ದಿ ರೋಟರಿ ಫೌಂಡೇಶನ್ ಹಾಗೂ ರೋಟರಿ ಜಿಲ್ಲೆ 3182, ಜೊತೆಸೇರಿ ರೋಟರಿ ಉಡುಪಿ ನೀಡುತ್ತಿದೆ.
ಗ್ಲೋಬಲ್ ಗ್ರ್ಯಾಂಟ್ ಮೂಲಕ ಸವಲತ್ತುಗಳ ಹಸ್ತಾಂತರ ಸಮಾರಂಭ: ಕಡಿಯಾಳಿ ಹಿರಿಯ ಪ್ರಾಥವಿಕ ಶಾಲೆಗೆ ಕೊಡಮಾಡುತ್ತಿರುವ ಈ ಎಲ್ಲಾ ಸವಲತ್ತುಗಳ ಹಸ್ತಾಂತರ ಸಮಾರಂಭವು ದಿನಾಂಕ 26ನೆಯ ಜೂನ್ 2023ರಂದು ಸೋಮವಾರ ಅಪರಾಹ್ನ 3 ಗಂಟೆಗೆ ಶಾಲಾ ಸಮುಚ್ಚಯದಲ್ಲಿ ಜರಗಲಿದೆ. ಸಂಸ್ಥೆಯ ಪರವಾಗಿ ಸವಲತ್ತುಗಳನ್ನು ಸ್ವೀಕರಿಸಲಿರುವ ಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾಂದ ಗಳವರು ದಾನಿಗಳನ್ನು ಅಭಿನಂದಿಸಿ ಆಶೀರ್ವದಿಸಲಿದ್ದಾರೆ.
ರೋಟರಿ ಜಿಲ್ಲಾ 3182 ರ ಗವರ್ನರ್ ಡಾ ಜಯ ಗೌರಿ, ಮಾಜಿ ಜಿಲ್ಲಾ ಗವರ್ನರ್ ಜಿಲ್ಲಾ ರೋಟರಿ ಪೌ೦ಡೇಶನ್ ಸಭಾಪತಿ ಡಾ ಪಿ ನಾರಾಯಣ, ಜಿಲ್ಲಾ ಗ್ರ್ಯಾಂಟ್ ಉಪಸಮಿತಿ ಸಭಾಪತಿ ಮಾಜಿ ಗವರ್ನರ್ ಬಿ ರಾಜಾರಾಮ ಭಟ್, ಮಾಜಿ ಜಿಲ್ಲಾ ಗವರ್ನರ್ ಬಿ ಎನ್ ರಮೇಶ್, ಕೊಡುಗೆಯ ಅಂತಾರಾಷ್ಟ್ರೀಯ ಪಾಲುದಾರರಾದ ಅಮೇರಿಕಾದ ರೋಟರಿ ಕ್ಲಬ್ ಸೆಂಟ್ರಲ್ ಚೆಸ್ಟರ್ ಕೌಂಟಿಯ ವಸಂತ ಪ್ರಭು ರೋಟರಿ ಜಿಲ್ಲೆ 7450, ರೋಸೆಂಟ್ ರೋಟರಿ ಕ್ಲಬ್ ರೋಟರಿ ಜಿಲ್ಲೆ 6060ರ ಡಾ ಚಂದ್ರಾ ಕಾಪು, ಶ್ರೀ ಸೋದೆ ವಾದಿರಾಜ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ರತ್ನ ಕುಮಾರ್, ಅಸಿಸ್ಟೆಂಟ್ ಗವರ್ನರ್ ರಾಮಚಂದ್ರ ಉಪಾಧ್ಯ ಉಪಸ್ಥಿತರಿದ್ದು ಕೊಡುಗೆಗಳನ್ನು ಹಸ್ತಾಂತರಿ ಸಲಿದ್ದಾರೆ.
ರೋಟರಿ ಉಡುಪಿ ಆಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ರೋಟರಿ ಉಡುಪಿಯ ಗ್ಲೋಬಲ್ ಗ್ರಾಂಟ್ ಯೋಜನೆಯ ಸಂಪರ್ಕಾಧಿಕಾರಿ ಜನಾರ್ದನ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.