
ಬೆಂಗಳೂರು: 2013ರಲ್ಲಿ ಪೆರ್ನೆಯಲ್ಲಿ ಸಂಭವಿಸಿದ್ದ ಎಲ್‌ಪಿಜಿ ಟ್ಯಾಂಕರ್ ದುರಂತದಲ್ಲಿ ಮೃತಪಟ್ಟಿದ್ದ 13 ಮಂದಿಯ ಕುಟುಂಬಗಳಿಗೆ ಸರ್ಕಾರ ಹೆಚ್ಚುವರಿ ಪರಿಹಾರ ಪ್ರಕಟಿಸಿರುವುದರಿಂದ, ಆ ಮೊತ್ತವನ್ನು ವಿಮಾ ಪರಿಹಾರದ ಮೊತ್ತದಲ್ಲಿ ಕಡಿತಗೊಳಿಸುವಂತೆ ಕೋರಿ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಎಲ್‌ಪಿಜಿ ಟ್ಯಾಂಕರ್‌ನ ವಿಮೆದಾರರಾದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಪಿ. ಶ್ರೀಸುಧಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರ ನೀಡಿರುವ ಹೆಚ್ಚುವರಿ ಪರಿಹಾರವು ಕುಟುಂಬಗಳಿಗೆ ಉಂಟಾಗಿರುವ ಆದಾಯ ನಷ್ಟವನ್ನು ಭರಿಸಿಲು ನೀಡಿರುವ ಸಾಮಾಜಿಕ ಭದ್ರತೆಯ ಭಾಗವಾಗಿದೆ. ಅದಕ್ಕೂ ವಿಮೆ ಪರಿಹಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಎಲ್‌ಪಿಜಿ ಟ್ಯಾಂಕರ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವಾಗಿ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪಾವತಿಸಿದ ಎಕ್ಸ್‌ಗ್ರೇಷಿಯಾವನ್ನು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಘೋಷಿಸಿರುವ ಪರಿಹಾರದಿಂದ ಕಡಿತಗೊಳಿಸಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಸರ್ಕಾರ ಸಂತ್ರಸ್ತರಿಗೆ ನೀಡುವ ಎಕ್ಸ್‌ಗ್ರೇಷಿಯಾವನ್ನು ಕಡಿತಗೊಳಿಸಲಾಗುವುದಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಎಕ್ಸ್‌ಗ್ರೇಷಿಯಾ ಪಾವತಿ ಸಾಮಾಜಿಕ ಭದ್ರತೆಯ ಭಾಗವೇ ಅಥವಾ ಆದಾಯ ನಷ್ಟಕ್ಕೆ ಪರಿಹಾರವೇ ಎಂಬುದು ಸ್ಪಷ್ಟವಾಗಿಲ್ಲ ಹಾಗೂ ಎಕ್ಸ್‌ಗ್ರೇಷಿಯಾ ಲೆಕ್ಕಾಚಾರಕ್ಕೆ ಆಧಾರವನ್ನು ಉಲ್ಲೇಖಿಸಲಾಗಿಲ್ಲ. ಎಲ್‌ಪಿಜಿ ಟ್ಯಾಂಕರ್‌ನಿಂದಾಗಿ ಅಪಘಾತ ಸಂಭವಿಸಿದ್ದು, ಅದಕ್ಕೆ ಚಾಲಕನ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮೋಟಾರು ವಾಹನ ಕಾಯ್ದೆ ಅಡಿಯಲ್ಲಿನ ಕ್ಲೇಮ್‌ಗಳನ್ನು ಪಡೆಯಲು ಸಂತ್ರಸ್ತರಿಗೆ ಅನುಮತಿಸಿದ್ದು, ಸಂಪೂರ್ಣ ಪರಿಹಾರದ ಮೊತ್ತವನ್ನು ಬಡ್ಡಿಯೊಂದಿಗೆ ಠೇವಣಿ ಇಡುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ.
