ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದದಲ್ಲಿ ವರದಿಯಾಗಿದೆ.ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ರಜನೀಶ್ (18) ಮೃತಪಟ್ಟ ಯುವಕ. ರಜನೀಶ ಕಳೆದ ಹಲವು ಸಮಯದಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, 3 ವಾರದ ಹಿಂದೆ ಉಡುಪಿಯ ಅಜ್ಜರಕಾಡಿನ ಜಿಲ್ಲಾ ಸರಕಾರಿ ಆಸ್ವತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಮರಳಿದ್ದರು. ಇದಾದ 10 ದಿನಗಳ ನಂತರ ಶಸ್ತ್ರ ಚಿಕಿತ್ಸೆಯ ಹೊಲಿಗೆ ತೆಗೆಯಿಸಿ, ವಾಂತಿ ಹಾಗೂ ಜ್ವರಕ್ಕೆ ಔಷಧಿ ಪಡೆದುಕೊಂಡು ಬಂದಿದ್ದರು ಎನ್ನಲಾಗಿದೆ.
ಆ.20ರಂದು ಭಾನುವಾರ ಬೆಳಗ್ಗೆ ಏಕಾಏಕಿ ವಾಂತಿ ಜ್ವರ ಉಲ್ಬಣಗೊಂಡ ಹಿನ್ನಲೆಯಲ್ಲಿ ರಜನೀಶ್ ನನ್ನು ತಕ್ಷಣವೇ ಕಾರ್ಕಳದ ಖಾಸಗಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆಸ್ವತ್ರೆಗೆ ಸಾಗಿಸುವ ವೇಳೆಗೆ ರಜನೀಶ್ ಮೃತಪಟ್ಟಿದ್ದಾನೆ.ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.