ಚಾಮರಾಜನಗರ: ನಿಧಿ ಆಸೆಗಾಗಿ ಜ್ಯೋತಿಷಿಯೊಬ್ಬನ ಮಾತು ಕೇಳಿ ಮಹಿಳೆಯೊಬ್ಬರು ಸ್ವಂತ ಮನೆಯಲ್ಲೇ ಗುಂಡಿ ತೋಡಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಹನೂರು ತಾಲೂಕಿನ ವಿ.ಎಸ್. ದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯೊಳಗೆ 20 ಅಡಿ ಆಳದ ಗುಂಡಿ ತೋಡಲಾಗಿದೆ. ತಮ್ಮ ಮನೆಯ ವಾಸ್ತು ಸರಿ ಇಲ್ಲ ಎಂದು ಶಾಸ್ತ್ರ ಕೇಳಲು ಹೋಗಿದ್ದ ಭಾಗ್ಯ ಎಂಬ ಗೃಹಿಣಿಗೆ ನಿಮ್ಮ ಮನೆಯಲ್ಲಿ ನಿಧಿ ಇದೆ ಎಂದು ನಂಬಿಸಿದ್ದ ಜ್ಯೋತಿಷಿ, ನಿಧಿ ಸಿಗಲು ಮನೆಯಲ್ಲಿ ವಿಶೇಷ ಪೂಜೆ ಮಾಡಬೇಕೆಂದು ಹೇಳಿ ಮಹಿಳೆಯಿಂದ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದನು. ಜ್ಯೋತಿಷಿ ಮಾತು ನಂಬಿದ್ದ ಮಹಿಳೆ ಮನೆಯಲ್ಲಿ ಕಳಸ ಇಟ್ಟು ವಿಶೇಷ ಪೂಜೆ ಮಾಡಿಸಿದ ಬಳಿಕ 20 ಅಡಿ ಆಳದ ಗುಂಡಿ ತೆಗೆದಿದ್ದಾರೆ. ಮನೆಯೊಳಗೆ ಗುಂಡಿ ತೆಗೆದ ವಿಷಯ ಅಕ್ಕ ಪಕ್ಕದವರಿಗೆ ತಿಳಿದು ರಾಮಾಪುರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಜ್ಯೋತಿಷಿ ಮನೆಯಿಂದ ತಪ್ಪಿಸಿಕೊಂಡು ತೆರಳಿದ್ದಾನೆ ಎನ್ನಲಾಗಿದೆ.