ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‌ವೊಬ್ಬರನ್ನ ಕೇಬಲ್ ವೈರ್ ಬಲಿ ಪಡೆದಿದೆ. ಲಕ್ಷ್ಮೀ ಬಾಯಿ ಜಾದವ್(36) ಮೃತ ದುರ್ದೈವಿ.
ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ಇಂದು ಕೆಲಸ ಮುಗಿಸಿ ಇಪ್ಪಾಡಿಯಿಂದ ಕುಣಿಗಲ್ ಪಟ್ಟಣಕ್ಕೆ ಬೈಕ್‌ನಲ್ಲಿ ಬರುವಾಗ ದಾರಿಯಲ್ಲಿ ಹಾದುಹೋಗಿದ್ದ ಕೇಬಲ್ ವೈರ್ಗೆ ವಿದ್ಯುತ್ ತಂತಿ ತಗುಲಿ ಲಕ್ಷ್ಮೀಬಾಯಿ ಮೇಲೆ ಬಿದ್ದಿದೆ. ಕೇಬಲ್ ವೈರ್ ಬಿದ್ದ ಪರಿಣಾಮ ಲಕ್ಷ್ಮೀಬಾಯಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇನ್ನು ಬೈಕ್ ಸವಾರ ಇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತ ಲಕ್ಷ್ಮೀ ಬಾಯಿ ಅವರ ಮೃತದೇಹವನ್ನ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದ್ದು, ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.