ಉಡುಪಿ : ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಸರಕಾರ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಜಂಕ್ ಫುಡ್ ನಂತಹ ಸತ್ವರಹಿತ ಆಹಾರದ ದಾಸರಾಗದೇ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಡಾ| ಮಮತಾ ದೇವಿಯವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಗಿ ಹೆಲ್ತ್ ಮಿಕ್ಸ್ ಯುತ ಹಾಲಿನ ವಿತರಣೆಯ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಳೆದು ಹೋದ ಸಮಯ ಮತ್ತೆ ಬರಲಾರದು. ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದತ್ತ ಮಾತ್ರ ಆಕರ್ಷಿತರಾಗದೇ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ತೋರಬೇಕು. ಸರಕಾರ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾ ಈಗಿನಿಂದಲೇ ದೃಢನಿರ್ಧಾರ ಮಾಡಿಕೊಂಡು ಸಾಧಕರಾಗುವಂತೆ ಕರೆ ನೀಡಿದರು.
ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷೆ ವಿನೋದಾ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ರಶ್ಮಿ ಸಿ. ಭಟ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗಣಪತಿ ಕೆ, ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಗೋವಿಂದ ಮಡಿವಾಳ, ನಗರಸಭಾ ಪೌರಾಯುಕ್ತ ರಾಯಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಡಾ| ಯಲ್ಲಮ್ಮ, ಪ್ರಾಂಶುಪಾಲೆ ಡಾ| ಸುಮಾ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಅಕ್ಷರದಾಸೋಹ- ಪಿ ಎಮ್ ಪೋಷಣ್ ನ ಶಿಕ್ಷಣಾಧಿಕಾರಿ ರುದ್ರೇಶ್ ಟಿ. ಆರ್. ಪ್ರಸ್ತಾವನೆಗೈದರು. ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು. ತಾಲ್ಲೂಕು ಅಕ್ಷರದಾಸೋಹ ಅಧಿಕಾರಿ ವಿವೇಕ ಗಾಂವ್ಕರ್ ಧನ್ಯವಾದಗೈದರು. ಶಿಕ್ಷಕ ರಾಮಚಂದ್ರ ಭಟ್ ನಿರೂಪಿಸಿದರು.