ಮಂಗಳೂರು : ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಸಿಗದಿದಲ್ಲಿ ನಮಗೆ ಕಸಿದುಕೊಳ್ಳಲು ಗೊತ್ತಿದೆ – ತಿಮರೋಡಿ

ಮಂಗಳೂರು : ಈ ದೇಶದಲ್ಲಿ ಅತ್ಯಾಚಾರಿಗಳಿಗೊಂದು, ಕೊಲೆಗಡುಕರಿಗೊಂದು ಕಾನೂನು. ಸೌಜನ್ಯಾ ಪ್ರಕರಣದಲ್ಲಿ 11 ವರ್ಷಗಳಲ್ಲಿ ನಿತ್ಯ ನಿರಂತರವಾಗಿ ಶವಗಳಂತೆ ಬದುಕಿ ನ್ಯಾಯ ಕೊಡಿ ಎಂದು ಶಾಂತಿಯುತ ಹೋರಾಟ ಮಾಡಿದ್ದೇವೆ.

ಮುಂದಿನ ದಿನಗಳಲ್ಲಿ ಕಾಮಾಂಧರ ಕೃತ್ಯಕ್ಕೆ ಪ್ರತಿಯಾಗಿ ಕ್ರಾಂತಿಯಾಗುತ್ತದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳಿಗೆ ಹಕ್ಕಿದೆ. ಮರ್ಯಾದೆಯಲ್ಲಿ ನಮ್ಮ ಹಕ್ಕನ್ನು ನಮಗೆ ಕೊಡದಿದ್ದರೆ, ನಿಮ್ಮಿಂದ ಹೇಗೆ ಕಸಿದುಕೊಳ್ಳಬೇಕೆಂದು ಗೊತ್ತಿದೆ. ದಯವಿಟ್ಟು ಅದಕ್ಕೆ ಆಸ್ಪದ ಕೊಡಬೇಡಿ. ಆದ್ದರಿಂದ ಕಾನೂನಿನ ಸುಪರ್ದಿಯಲ್ಲಿ ಒಂದು ಒಳ್ಳೆಯ ತನಿಖಾ ತಂಡವನ್ನು ರಚಿಸಿ ಕಾನೂನಡಿಯಲ್ಲಿ ಮರು ತನಿಖೆಯಾಗಬೇಕು ಎಂದು ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದಾರೆ. ಸೌಜನ್ಯಾ ಸಾವಿಗೆ ನ್ಯಾಯ ಒದಗಿಸಲು ಹಾಗೂ ಸರ್ಕಾರ ಮರುತನಿಖೆಗೆ ಆದೇಶಿಸಬೇಕೆಂದು ಮಂಗಳೂರು ಸೌಜನ್ಯಾ ಹೋರಾಟ ಸಮಿತಿಯಿಂದ ಕದ್ರಿ‌ ಬಯಲು ರಂಗಮಂದಿರದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಸತ್ಯ ಹೇಳಿದವನು ಸತ್ತು ಹೋದ. ಅನ್ಯಾಯ ಮಾಡಿದವನು ಇನ್ನೂ ಅನ್ನ ತಿನ್ನುತ್ತಿದ್ದಾನೆ. ಬಿಡಬೇಕಾ ಇವರನ್ನು, ಆದ್ದರಿಂದ ನಮ್ಮನ್ನು ಕೆಣಕಬೇಡಿ. ಆಕೆಗಾದ ಅನ್ಯಾಯಕ್ಕೆ ನಮಗೆ ಈವರೆಗೆ ನ್ಯಾಯ ಸಿಕ್ಕಿಲ್ಲ. ಅದಕ್ಕಾಗಿ ನಾವು ನ್ಯಾಯ ಕೊಡಿ ಎಂದು ಜನರಲ್ಲಿ ಕೇಳುತ್ತಿದ್ದೇವೆ‌. ಸೌಜನ್ಯಾ ಕಾರಣ ಮಾತ್ರ. ತ್ರೇತೆಯಲ್ಲಿ ಸೀತಾ, ದ್ವಾಪರದಲ್ಲಿ ದ್ರೌಪದಿ, ಕಲಿಯುಗದಲ್ಲಿ ಸೌಜನ್ಯಾ. ಆಕೆಯೊಬ್ಬ ಶಕ್ತಿ ಎಂದು ಹೇಳಿದರು. ಗೃಹಮಂತ್ರಿಯವರು ಸೌಜನ್ಯಾ ಪ್ರಕರಣವನ್ನು ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ. ಇವರೆಲ್ಲ ಯಾವಾಗ ಮುಗಿಯುತ್ತಾರೋ ಗೊತ್ತಿಲ್ಲ. ನಮ್ಮ ಹೋರಾಟವನ್ನು ಬರಿ ಸಣ್ಣ ಹೋರಾಟ ಎಂದು ನಗಣ್ಯ ಮಾಡುತ್ತಿದ್ದಾರೆ. ಒಂದು ದಿವಸ ನಿಮ್ಮ ಮನೆ ಬಾಗಿಲಿಗೆ ಮುತ್ತಿಗೆ ಹಾಕುವಾಗ ಗೊತ್ತಾಗುತ್ತದೆ ನಮ್ಮ ಶಕ್ತಿ ಎಂದು ಮಹೇಶ್ ಶೆಟ್ಟಿ ತಿಮರೋಡಿ ಎಚ್ಚರಿಕೆ ನೀಡಿದರು. ಸೌಜನ್ಯಾ ತಾಯಿ ಕುಸುಮಾವತಿ ಮಾತನಾಡಿ, ಸೌಜನ್ಯ ಕೊಲೆ ಪ್ರಕರಣದಲ್ಲಿ ವಿಳಂಬವಾದರೂ ನೈಜ ಆರೋಪಿಯ ಬಂಧನ ಮೂಲಕ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಎಲ್ಲರಲ್ಲಿ ನ್ಯಾಯಕ್ಕಾಗಿ ಸೆರಗೊಡ್ಡಿ ಬೇಡಿದರು. ಕದ್ರಿ ಶ್ರೀ ಯೋಗೀಶ್ವರ ಮಠದ ಶ್ರೀರಾಜಯೋಗಿ ನಿರ್ಮಲನಾಥ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕಿಂತ ಮೊದಲು ಶ್ರೀಕ್ಷೇತ್ರ ಕದ್ರಿಯಿಂದ ಕಾರ್ಯಕ್ರಮದ ವೇದಿಕೆಯ ಬಳಿಗೆ ಪಾದಯಾತ್ರೆ ಮಾಡಲಾಯಿತು.

Check Also

ಮಂಗಳೂರು: ಹೆದ್ದಾರಿ ಮಧ್ಯೆ ಧಗ ಧಗನೆ ಹೊತ್ತಿ ಉರಿದ ಬಿಎಂಡಬ್ಲ್ಯು ಕಾರು..!

ಮಂಗಳೂರು: ದೆಹಲಿ ನೋಂದಣಿಯ ಹಳೆಯ ಬಿಎಂಡಬ್ಲ್ಯು ಕಾರನ್ನು ಸರ್ವಿಸಿಗೆ ಒಯ್ಯುತ್ತಿದ್ದಾಗಲೇ ಹೆದ್ದಾರಿ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟು ಬೂದಿಯಾದ ಘಟನೆ …

Leave a Reply

Your email address will not be published. Required fields are marked *

You cannot copy content of this page.