ಮಂಗಳೂರು: ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಂತ್ರಸ್ತ ವಕೀಲರಿಗೆ 3 ಲಕ್ಷ ರೂ ಪರಿಹಾರ ನೀಡುವಂತೆ ಪುಂಜಾಲಕಟ್ಟೆ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿದೆ.
ಡಿ.3 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ಯುವ ವಕೀಲ ಕುಲದೀಪ್ ಶಟ್ಟಿ ಅವರ ಮೇಲೆ ಅಮಾನುಷವಾಗಿ ವರ್ತಿಸಿ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿತ್ತು.
ತನ್ನ ಮೇಲೆ ದೌರ್ಜನ್ಯ ಎಸಗಿದ ಪುಂಜಾಲಕಟ್ಟೆ ಸಬ್ ಇನ್ಸ್‌ಪೆಕ್ಟರ್ ಕೆ.ಪಿ ಸುತೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ಪರಿಹಾರ ಒದಗಿಸಬೇಕು ಎಂದು ಕೋರಿ ಯುವ ವಕೀಲ ಕುಲದೀಪ್ ಶೆಟ್ಟಿ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದರು.
ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ ಆದೇಶವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿದ್ದು, ಹಲ್ಲೆಗೊಳಗಾದ ಸಂತ್ರಸ್ತ ಯುವ ವಕೀಲರಿಗೆ 3 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಆದೇಶಿಸಿದೆ.
ಪುಂಜಾಲಕಟ್ಟೆ ಪೊಲೀಸರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ, ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರಿಗೆ ಅಧಿಕಾರ ವ್ಯಾಪ್ತಿ ಇಲ್ಲ. ಕಾನೂನುಬಾಹಿರವಾಗಿ ವಕೀಲರನ್ನು ಬಂಧಿಸಿ ಹಲ್ಲೆ ನಡೆಸಲಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮದ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಅರ್ಜಿದಾರ ಕುಲದೀಪ್ ಶೆಟ್ಟಿ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿದ್ದರು. ಗಣಪತಿ ಭಟ್ ವಕಾಲತ್ತು ವಹಿಸಿದ್ದರು.