
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದ್ದು, ಉಪ ಸಭಾಪತಿ ಮೇಲೆ ಕಾಗದ ಪತ್ರ ಎಸೆದು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನಲೆಯಲ್ಲಿ ಬಿಜೆಪಿಯ 10 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿಯ ಡಾ.ಅಶ್ವತ್ಥ್ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್.ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಮತ್ತು ಭರತ್ ಶೆಟ್ಟಿ ಅವರನ್ನು ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಮಾಡಿದ್ದಾರೆ. ಈ 10 ಸದಸ್ಯರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ. ಕಲಾಪದ ವೇಳೆ ಬಿಜೆಪಿ ಸದಸ್ಯರಿಂದ ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆಯಲಾಗಿದ್ದು, ಈ ಸಂಬಂಧ ಸ್ಪೀಕರ್ ಯುಟಿ ಖಾದರ್ ಅವರಿಗೆ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದಾರೆ. ಈ ದೂರಿನ ಅಧಾರದ ಮೇಲೆ ಬಿಜೆಪಿಯ 10 ಸದಸ್ಯರನ್ನು ಅಮಾನತು ಮಾಡಿದ್ದಾರೆ.
