ನೊಂದ ಎಸ್ಪಿ ನಾಯಕ ನೀಡಿದ ದೂರಿನ ಆಧಾರದ ಮೇಲೆ, ಜಿಲ್ಲಾ ಪೊಲೀಸರು ರಾಜಕಾರಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರ ಹುಡುಕಾಟ ನಡೆಸಿದ್ದಾರೆ. ಹರ್ದೋಯ್ ಘಟಕದ ಬಿಜೆಪಿ ಕಾರ್ಯದರ್ಶಿ ಆಶಿಶ್ ಶುಕ್ಲಾ (45), ಸ್ಥಳೀಯ ಎಸ್ಪಿ ನಾಯಕನ 25 ವರ್ಷದ ಪುತ್ರಿಯ ಜೊತೆ ಓಡಿಹೋಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಯುವತಿಯ ಮದುವೆ ನಿಶ್ಚಯವಾಗಿತ್ತು. ಇಬ್ಬರೂ ನೆರೆಹೊರೆಯವರಾಗಿದ್ದು, ಶುಕ್ಲಾಗೆ ಈಗಾಗಲೇ ಮದುವೆಯಾಗಿದ್ದು, 21 ವರ್ಷದ ಮಗ ಮತ್ತು ಏಳು ವರ್ಷದ ಮಗಳಿದ್ದಾಳೆ.
ಯುವತಿಯ ಮನೆಯವರು ಆಕೆಯ ಮದುವೆಗೆ ತಯಾರಿ ನಡೆಸುತ್ತಿದ್ದು, ಆಕೆ ಶುಕ್ಲಾ ಜೊತೆಗೆ ಒಂದು ವಾರದ ಹಿಂದೆ ಓಡಿಹೋಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈಮಧ್ಯೆ, ಶುಕ್ಲಾ ಅವರನ್ನು ಬಿಜೆಪಿ ರಾಜ್ಯ ಘಟಕವು ಅವರ ಸಾಂಸ್ಥಿಕ ಜವಾಬ್ದಾರಿಗಳಿಂದ ಕೈಬಿಟ್ಟಿತು ಮತ್ತು ಜನವರಿ 12 ರಂದು ಅವರ ಪ್ರಾಥಮಿಕ ಸದಸ್ಯತ್ವದಿಂದಲೂ ಉಚ್ಛಾಟಿಸಿದೆ. ಬಿಜೆಪಿ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ಪ್ರಕಾರ, ಶುಕ್ಲಾ ಅವರು ಪಕ್ಷದಲ್ಲಿ ಸ್ವಲ್ಪ ಸಮಯದವರೆಗೆ ನಿಷ್ಕ್ರಿಯರಾಗಿದ್ದರು. ಪಕ್ಷದ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸದ ಕಾರಣ ಮತ್ತು ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧವಾಗಿ ವರ್ತಿಸಿದ ಕಾರಣ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಈಗ ಹರ್ದೋಯಿ ಪೊಲೀಸರು ದೇಶದ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ಹೇಳಿದ್ದಾರೆ. ಶುಕ್ಲಾ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅವರ ಸಂಬಂಧಿಕರನ್ನು ವಿಚಾರಣೆ ನಡೆಸಲಾಗುತ್ತಿದೆ. ಶುಕ್ಲಾ ಮತ್ತು ಯುವತಿಯ ಮೊಬೈಲ್ ಫೋನ್ ಸಂಖ್ಯೆಗಳನ್ನು ಟ್ರೇಸ್ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಅವರನ್ನು ಪತ್ತೆಹಚ್ಚಲಾಗುವುದು ಎಂದು ಹರ್ದೋಯಿ ಎಎಸ್ಪಿ ಅನಿಲ್ ಕುಮಾರ್ ಯಾದವ್ ಹೇಳಿದ್ದಾರೆ. ಮತ್ತೊಂದೆಡೆ, ಈ ಘಟನೆಯು ಎಸ್ಪಿಯ ಆಕ್ರೋಷಕ್ಕೆ ಕಾರಣವಾಗಿದ್ದು, ಬಿಜೆಪಿಯ ಆಡಳಿತದಲ್ಲಿ ಹೆಣ್ಣುಮಕ್ಕಳು ಹೇಗೆ ಸುರಕ್ಷಿತ ಎಂಬುದನ್ನು ಇದು ಸೂಚಿಸುತ್ತದೆ ಎಂದು ಬಿಜೆಪಿ ವಿರುದ್ಧ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ. ಎಸ್ಪಿಯ ಮಾಜಿ ಜಿಲ್ಲಾಧ್ಯಕ್ಷ ಜಿತೇಂದ್ರ ವರ್ಮಾ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಬೀದಿಗಿಳಿಯುವುದಾಗಿ ಬೆದರಿಕೆ ಹಾಕಿದ್ದಾರೆ.