ಮಂಗಳೂರು: ನಿಯಂತ್ರಣ ತಪ್ಪಿ ಕ್ರೇನ್ವೊಂದು ಪಲ್ಟಿಯಾದ ಪರಿಣಾಮ ವಾಹನದ ಆಪರೇಟರ್ ಮೃತಪಟ್ಟ ಘಟನೆ ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ನಡೆದಿದೆ.
ಮೃತಪಟ್ಟ ಕ್ರೇನ್ ಆಪರೇಟರನ್ನು ಯುಪಿ ಮೂಲದ ಅರುಣ್ ಕುಮಾರ್ ಜಾದವ್ ಎಂದು ಗುರುತಿಸಲಾಗಿದೆ.
ಕ್ರೇನ್ ಅದ್ಯಪಾಡಿ ಕಡೆಯಿಂದ ವಿಮಾನ ನಿಲ್ದಾಣದ ನಿರ್ಗಮನ ಮಾರ್ಗವಾಗಿ ಕೆಂಜಾರು ಜಂಕ್ಷನ್ಗೆ ಹೋಗುತ್ತಿತ್ತು. ಈ ವೇಳೆ ಇಳಿಜಾರಾಗಿರುವ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಹಳ್ಳಕ್ಕೆ ಬಿದ್ದಿದೆ. ಘಟನೆಯಿಂದ ಕ್ರೇನ್ ಆಪರೇಟರ್ ಅರುಣ್ ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.