
ಉಡುಪಿ: ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಗರ್ಭಿಣಿ ಸಹಿತ ಮೂವರು ಗಾಯಗೊಂಡ ಘಟನೆ ರಾ.ಹೆ. 66ರ ಉದ್ಯಾವರದಲ್ಲಿ ಸಂಭವಿಸಿದೆ. ಪೂರ್ಣಿಮಾ, ಅವರ ಪುತ್ರಿ ಪ್ರಿಯದರ್ಶಿನಿ ಮತ್ತು ಗರ್ಭಿಣಿ ಸೀಮಾ ಸಾಲಿಯಾನ್ ಗಾಯಾಳುಗಳು. ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಬಡಾ ಎರ್ಮಾಳ್‌ಗೆ ಬಂದಿದ್ದು, ಕೆಲಸದ ನಿಮಿತ್ತ ಉಡುಪಿಗೆ ಹೋಗಿದ್ದರು. ಅಲ್ಲಿಂದ ರಿಕ್ಷಾ ಗೊತ್ತುಪಡಿಸಿ ಎರ್ಮಾಳಿಗೆ ಮರಳುತ್ತಿದ್ದಾಗ ಉದ್ಯಾವರ ಕ್ಲಾಸಿಕ್ ಆಟೋ ಗ್ಯಾರೇಜ್ ಬಳಿ ಅಪಘಾತ ಸಂಭವಿಸಿದೆ.ಗಾಯಾಳುಗಳನ್ನು ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
