ಲಕ್ನೋ: ಭಾರತೀಯ ಸೇನೆಯ ಬಗ್ಗೆ ಪ್ರಮುಖ ಮಾಹಿತಿಗಳನ್ನ ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್‌ಗಳಿಗೆ ರಹಸ್ಯವಾಗಿ ತಲುಪಿಸುತ್ತಿದ್ದ ಆರೋಪದ ಮೇಲೆ ಭಾನುವಾರ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಶಂಕಿತ ಐಎಸ್‌ಐ ಏಜೆಂಟ್‌ನನ್ನ ಬಂಧಿಸಿದೆ.
ಶಂಕಿತ ISI ಏಜೆಂಟ್‌ನನ್ನ ಮೊಹಮ್ಮದ್ ರಯೀಸ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಗೊಂಡಾದ ತರಬ್‌ಗಂಜ್ ಪ್ರದೇಶದ ನಿವಾಸ ಮೊಹಮ್ಮದ್ ರಯೀಸ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಅರ್ಮಾನ್ ಎಂಬಾತನ ಸಂಪರ್ಕಕ್ಕೆ ಬಂದಿದ್ದಾನೆ. ನಂತರ ಭಾರತದಲ್ಲಿ ಮುಸ್ಲಿಂ ಸಮುದಾಯದ ಸದಸ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅರ್ಮಾನ್ ತನ್ನನ್ನ ಪ್ರಚೋದಿಸಲು ಪ್ರತ್ನಿಸಿರುವುದಾಗಿ ರಯೀಸ್ ಎಂದು ತಿಳಿಸಿದ್ದಾರೆ.
ವಿಚಾರಣೆಯಲ್ಲಿರಯೀಸ್ಹೇಳಿದ್ದೇನು?
ತಾನು ಕೆಲಸಕ್ಕೆ ಸೌದಿ ಅರೇಬಿಯಾಕ್ಕೆ ಹೋಗಬೇಕೆಂದು ಅರ್ಮಾನ್‌ಗೆ ಹೇಳಿಕೊಂಡಿದ್ದೆ. ನಂತರ ಅರ್ಮಾನ್ ಪಾಕಿಸ್ತಾನ ವ್ಯಕ್ತಿಯೊಬ್ಬನಿಗೆ ತನ್ನ ಸಂಪರ್ಕ ಸಂಖ್ಯೆ ನೀಡುವುದಾಗಿ ತಿಳಿಸಿದ. ನಂತರ ನನ್ನನ್ನು ಭಾರತದ ವಿರುದ್ಧ ಗೂಢಚಾರಿಕೆ ಮಾಡುವಂತೆ ಮನವೊಲಿಸಿದ. ಈ ಕೆಲಸ ಮಾಡಿದ್ರೆ ಕೈತುಂಬ ಹಣ ನೀಡುವುದಾಗಿಯೂ ಹೇಳಿದ್ದ. ಅದಾದ ಮೇಲೆ ಕಳೆದ ವರ್ಷ ನನಗೆ ವಿದೇಶ ಸಂಖ್ಯೆಯಿಂದ ದೂರವಾಣಿ ಕರೆ ಬಂದಿತು. ಆ ವ್ಯಕ್ತಿ ತನ್ನನ್ನ ಹುಸೇನ್ ಎಂದು ಪರಿಚಯಿಸಿಕೊಂಡಿದ್ದ. ನನ್ನನ್ನು ಪಾಕಿಸ್ತಾನಕ್ಕೆ ಗೂಢಚಾರಿಕೆ ಮಾಡುವಂತೆ ಹೇಳಿದ್ದ.
ನನ್ನೊಂದಿಗೆ ಮಾತನಾಡುತ್ತಾ, ಮಿಲಿಟರಿ ಕಂಟೋನ್ಮೆಂಟ್ ಮತ್ತು ಸ್ಥಾಪನೆಗಳ ಬಗ್ಗೆ ಮಾಹಿತಿ ಕಳುಹಿಸುವ ಕೆಲಸವನ್ನು ವಹಿಸಿದ. ಈ ಕೆಲಸಕ್ಕಾಗಿ ನಾನು ನನ್ನ ಸ್ನೇಹಿತರನ್ನೂ ಜೊತೆಗೆ ಸೇರಿಸಿಕೊಂಡಿದ್ದೆ. ನಾನು ಮಾಹಿತಿ ಕೊಟ್ಟರೆ ಪ್ರತಿಯಾಗಿ ನನಗೆ 15 ಸಾವಿರ ರೂ. ಕೊಡುತ್ತಿದ್ದ ಎಂದು ರಯೀಸ್ ಹೇಳಿದ್ದಾನೆ. ಈ ಬಗ್ಗೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳಕ್ಕೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ಕೈಗೊಂಡಿದ್ದು, ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರೋಪಿ ವಿರುದ್ಧ ಲಕ್ನೋ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 121ಎ ಮತ್ತು 123 ಮತ್ತು ಅಧಿಕಾರಿಗಳ ರಹಸ್ಯ ಕಾಯ್ದೆ-1923ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.