ಕುಂದಾಪುರ ಜು.17 : ಗ್ರಾಹಕರೊಬ್ಬರಿಗೆ ಕಳಪೆ ಗುಣಮಟ್ಟದ ಮಾರ್ಬಲ್ ಪೂರೈಕೆ ಮಾಡಿದ ಉಡುಪಿಯ ಗಣೇಶ್ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಒಂದು ಲಕ್ಷಕ್ಕೂ ಅಧಿಕ ದಂಡ ವಿಧಿಸಿದೆ. ಸ್ಟೇಟ್ ಬ್ಯಾಂಕ್ ಉದ್ಯೋಗಿ ಪ್ರಕಾಶ್ ಎಂಬವರು ತಮ್ಮ ಹಳೆ ಮನೆಯ ನವೀಕರಣಕ್ಕಾಗಿ ಉಡುಪಿಯ ನಿಟ್ಟೂರಿನಲ್ಲಿ ಇರುವ ಗಣೇಶ್ ಮಾರ್ಬಲ್ಸ್ ನಿಂದ ಕಜಾರಿಯ ಕಂಪೆನಿಯ ಸುಮಾರು 81,158 ರೂಪಾಯಿ ಬೆಲೆ ಬಾಳುವ ಟೈಲ್ಸ್ ಗಳನ್ನು ಖರೀದಿ ಮಾಡಿದ್ದರು. ಆದರೆ ಖರೀದಿ ಮಾಡಿದ ಟೈಲ್ಸ್ ಗಳ ಪೈಕಿ ಹಾಲ್ ಹಾಗೂ ಬೆಡ್ ರೂಂಗೆ ಅಳವಡಿಸಿದ ಟೈಲ್ಸ್ ಗಳ ಎಲ್ಲಾ ಅಂಚುಗಳು ಮೇಲಕ್ಕೆ ಉಬ್ಬಿಕೊಂಡಿದ್ದು ದೋಷಪೂರಿತವಾಗಿದ್ದವು. ಈ ಬಗ್ಗೆ ಪ್ರಕಾಶ್ ರವರು ಗಣೇಶ್ ಮಾರ್ಬಲ್ಸ್ ರವರನ್ನು ಸಂಪರ್ಕಿಸಿ ವಿಚಾರ ತಿಳಿಸಿ ಬೇರೆ ಟೈಲ್ಸ್ ಗಳನ್ನು ನೀಡುವಂತೆ ಕೇಳಿಕೊಂಡಾಗ ಹಾರಿಕೆಯ ಉತ್ತರ ನೀಡಿದ್ದರು. ನಂತರದ ಕಜಾರಿಯಾ ಕಂಪೆನಿಯನ್ನು ಸಂಪರ್ಕಿಸಿದ್ದರೂ ಕೂಡ ಸರಿಯಾದ ಸ್ಪಂದನೆ ಸಿಗಲಿಲ್ಲ. ಹಿನ್ನೆಲೆಯಲ್ಲಿ ಪ್ರಕಾಶ್ ಅವರು ಗಣೇಶ್ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿ ವಿರುದ್ದ ದೋಷಪೂರಿತ ಟೈಲ್ಸ್ ಪೂರೈಕೆ, ನಷ್ಟ ಹಾಗೂ ಮಾನಸಿಕವಾಗಿ ವೇದನೆಯನ್ನು ಉಂಟುಮಾಡುವ ಕುರಿತು 5,60,000 ರೂಪಾಯಿ ಪರಿಹಾರ ನೀಡಲು ಸೂಕ್ತ ನಿರ್ದೇಶನ ಕೋರಿ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣದ ವಾದ, ವಿವಾದ ಆಲಿಸಿದ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಮಿಷನರ್ ನೇಮಕ ಮಾಡುವ ಮೂಲಕ ಸ್ಥಳ ಪರಿಶೀಲನೆಯನ್ನು ನಡೆಸಿತ್ತು. ಈ ವೇಳೆಯಲ್ಲಿ ದೋಷಪೂರಿತ ಟೈಲ್ಸ್ ಪೂರೈಕೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಯೋಗವು, ಗಣೇಶ್ ಮಾರ್ಬಲ್ಸ್ ಗೆ ಹಾಗೂ ಕಜಾರಿಯ ಕಂಪೆನಿಯವರಿಗೆ ಟೈಲ್ಸ್ ಖರೀದಿಯ 50,592 ರೂ. ಕೆಲಸದ ವೆಚ್ಚ ರೂಪಾಯಿ 15,000ರೂ. ಮಾನಸಿಕ ಹಿಂಸೆ, ತೊಂದರೆ, ದೈಹಿಕ ಶ್ರಮ ಇತ್ಯಾದಿಗಳಿಗೆ ಪರಿಹಾರವಾಗಿ ರೂಪಾಯಿ 25,000 ರೂ. ಹಾಗೂ ವ್ಯಾಜ್ಯದ ಖರ್ಚು ರೂಪಾಯಿ 20,000 ರೂಪಾಯಿಯನ್ನು ಗ್ರಾಹಕನಿಗೆ ಒಟ್ಟು 30 ದಿನಗಳ ಒಳಗಾಗಿ ಪಾವತಿಸುವಂತೆ ಆದೇಶಿಸಿರುತ್ತದೆ. ಈ ಪ್ರಕರಣದ ವಿಚಾರಣೆಯಲ್ಲಿ ಗ್ರಾಹಕ ಪ್ರಕಾಶ್ ಅವರ ಪರವಾಗಿ ಕುಂದಾಪುರದ ನ್ಯಾಯಾವಾದಿ ನೀಲ್ ಬ್ರಿಯಾನ್ ಪಿರೇರಾ ಅವರು ವಾದಿಸಿದರು.