ಉಳ್ಳಾಲ: ಖಾಸಗಿ ಕಾಲೇಜು ವಸತಿಗೃಹದ ಸಮೀಪ ಡ್ರಗ್ಸ್ ಮಾರಾಟ ನಡೆಸಲು ಮನೆಯ ಬಳಿಯಿರುವ ಶೆಡ್ ನಲ್ಲಿ ದಾಸ್ತಾನಿರಿಸಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು ರೂ.3, 60, 000 ಮೌಲ್ಯದ 72 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಗಂಬಿಲ ವೈದ್ಯನಾಥ ನಗರ ನಿವಾಸಿ ಅಕ್ಷತ್ ಕುಮಾರ್ (32) ಎಂಬಾತನನ್ನು ಬಂಧಿಸಲಾಗಿದೆ.
ಕೋಟೆಕಾರು ಗ್ರಾಮದ ಖಾಸಗಿ ಕಾಲೇಜಿನ ಪುರುಷರ ವಸತಿ ಗೃಹದ ಸಮೀಪದ ತನ್ನ ಮನೆಯ ಶೆಡ್ ನಲ್ಲಿ ಪ್ಲಾಸ್ಟಿಕ್ ಲಕೋಟೆ ಹಾಗೂ ಪ್ಲಾಸ್ಟಿಕ್ ಡಬ್ಬದಲ್ಲಿ ಎಂಡಿಎಂಎ ದಾಸ್ತಾನಿರಿಸಿರುವುದರ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇತ್ತೀಚೆಗೆ ಸಿಸಿಬಿ ಪೊಲೀಸರ ತಂಡದಿಂದ ಕರ್ನಾಟಕ ಗಡಿಭಾಗ ತೌಡುಗೋಳಿ ಕ್ರಾಸ್ ಸಮೀಪ ಬಂಧಿತರಾಗಿದ್ದ ನಾಜಿಮ್ ಯಾನೆ ನಿಜ್ಜು ಮತ್ತು ಮಹಮ್ಮದ್ ರಿಫಾಸ್ ಯಾನೆ ನಿಪ್ಪು ಎಂಬಾತನ ಮೂಲಕ ಖರೀದಿ ಮಾಡಿದ್ದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ದಾಸ್ತಾನಿರಿಸಿ ಅದನ್ನು ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಆರೋಪಿ ಕೈಯಿಂದ ವಿವೋ ಮೊಬೈಲ್, ನಗದು ರೂ. 20, 880, ಡಿಜಿಟಲ್ ತೂಕದ ಮಾಪನ, ಪ್ಲಾಸ್ಟಿಕ್ ಲಕೋಟೆ, ಪ್ಲಾಸ್ಟಿಕ್ ಡಬ್ಬ, ಸೀಲರ್ ಮೆಷಿನ್ ಸೇರಿದಂತೆ 72 ಗ್ರಾಂ ತೂಕದ ಎಂಡಿಎಂಎ ನಿಷೇಧಿತ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.