

ಚಾಮರಾಜನಗರ : ʼಮಕ್ಕಳನ್ನು ಶಾಲೆಗೆ ಕಳುಹಿಸಿ, ಇಲ್ಲವೇ ಸಮುದಾಯದಿಂದಲೇ ಆಚೆ ಉಳಿಸಿರಿʼ ಎಂಬ ವಿಶಿಷ್ಟ, ಕಠಿಣ ಎಚ್ಚರಿಕೆಯೊಂದನ್ನು ಚಾಮರಾಜನಗರದ ಉಪ್ಪಾರ ಸಮುದಾಯದ ಮುಖಂಡರು ತಮ್ಮ ಸಮುದಾಯಕ್ಕೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಉಪ್ಪಾರ ಸಮುದಾಯದ ಮಕ್ಕಳೇ ಹೆಚ್ಚಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯ ಉಪ್ಪಾರ ಸಮಾಜ ಮುಖಂಡರು ಈ ಕಠಿಣ ನಿರ್ಣಯ ಕೈಗೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಅಂಥ ಪಾಲಕರಿಗೆ ಕಠಿಣ ದಂಡನೆ ಎದುರಾಗಲಿದೆ. ಮಕ್ಕಳನ್ನು ಶಾಲೆಗೆ ಕಳಿಸದಿದ್ದರೆ ಅಂತಹ ಕುಟುಂಬವನ್ನು ಸಮಾಜದಿಂದಲೇ ದೂರ ಇಡುವ ನಿರ್ಣಯವನ್ನು ಉಪ್ಪಾರ ಸಮಾಜ ಗಡಿ ಯಜಮಾನರು ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ 158 ಉಪ್ಪಾರ ಸಮಾಜದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಬಾಲ್ಯ ವಿವಾಹ, ಸಾಮಾಜಿಕ ಕಟ್ಟುಪಾಡುಗಳಿಂದಾಗಿ ಕಂದಮ್ಮಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಯಲ್ಲಿ 634 ಮಕ್ಕಳು ಶಾಲೆಯಿಂದ ದೂರ ಇದ್ದು, ಅದರಲ್ಲಿ ಉಪ್ಪಾರ ಸಮಾಜದ ಮಕ್ಕಳೇ ಅಧಿಕ. ಇದು ಸಮುದಾಯದ ಹಿಂದುಳಿಯುವಿಕೆಗೆ ಕಾರಣವಾಗುತ್ತಿದೆ ಎಂದು ಮುಖಂಡರು ಎಚ್ಚರಿಸಿದ್ದಾರೆ.