

ಹಾಸನ : ಲವ್ ಬ್ರೇಕಪ್ ಆದ ಕೋಪಕ್ಕೆ ತನ್ನ ಪ್ರೇಯಸಿಯ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ ತಾಲೂಕಿನ ಕುಂತಿಗುಡ್ಡದಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಸುಚಿತ್ರಾ (20) ಎಂದು ಗುರುತಿಸಲಾಗಿದೆ. ತೇಜಸ್ (23) ಕೊಲೆ ಮಾಡಿರುವ ಪ್ರಿಯಕರನಾಗಿದ್ದಾನೆ.
ಇವರಿಬ್ಬರು ಇಂಜಿನಿಯರಿಂಗ್ ಒದುತ್ತಿರುವ ವಿಧ್ಯಾರ್ಥಿಗಳಾಗಿದ್ದು, ತೇಜಸ್ ಹಾಗೂ ಸುಚಿತ್ರಾ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಬ್ರೇಕಪ್ ಆಗಿದೆ. ಈ ನಡುವೆ ಮರು ಸಂಧಾನದ ಮಾತುಕತೆ ಎಂದು ಆಕೆಯನ್ನು ಆಹ್ವಾನಿಸಿದ ಹುಡುಗ ಪ್ರೀತಿಸಲು ನಿರಾಕರಿಸಿದ್ದಕ್ಕೆ ತೇಜಸ್ ಸುಚಿತ್ರಾಳನ್ನು ತನ್ನೊಂದಿಗೆ ಕುಂತಿಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಇಂದು ಮುಂಜಾನೆ ಯುವತಿಯನ್ನು ಒಂಟಿಯಾಗಿ ಕರೆದೊಯ್ದು ಬಳಿಕ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಆರೋಪಿ ತೇಜಸ್ ತಪ್ಪಿಸಿಕೊಂಡಿದ್ದನು. ಸುಚಿತ್ರಾ ಆಲೂರು ತಾಲೂಕಿನ ಕವಳಗೆರೆ ಗ್ರಾಮದವಳಾಗಿದ್ದು, ಮೊಸಳೆಹೊಸಳ್ಳಿ ಎಂಜಿನಿಯರ್ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಪದವಿ ಓದುತ್ತಿದ್ದಳು. ಮೂಲತಃ ಹಾಸನ ತಾಲೂಕಿನ ಶಂಕರನಹಳ್ಳಿ ಗ್ರಾಮದವನಾದ ತೇಜಸ್ ಕೂಡಾ ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದನು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.