ಬೆಂಗಳೂರು: ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡವರಿಗೆ ಐದು ಸಾವಿರ ಹಾಗೂ ಸಾವನ್ನಪ್ಪಿದ್ರೇ 5 ಲಕ್ಷ ಪರಿಹಾರ ನೀಡುವ ನಿಯಮವು ಶೀಘ್ರವೇ ಜಾರಿಗೊಳಿಸೋ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಬುಧವಾರ ಪ್ರಮಾಣ ಪತ್ರ ಸಲ್ಲಿಸಿದೆ.
ಪ್ರಾಣಿಗಳ ಜನನ ನಿಯಂತ್ರಣ(ನಾಯಿ) ಅಧಿನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಎಲ್ ರಮೇಶ್ ನಾಯಕ್ ಸಲ್ಲಿಸಿದ್ದಂತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ವಿಭಾಗಿಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅ.6, 2023ರಂದು ಸಭೆ ನಡೆಸಲಾಗಿದೆ. ನಾಯಿ ದಾಳಿಯಿಂದ ಗಾಯಗೊಂಡವರಿಗೆ 5,000 ಹಾಗೂ ಜೀವಹಾನಿಯಾದ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವ ಕುರಿತು ಚರ್ಚಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ಪ್ರತಿಕ್ರಿಯೆಗೆ ನ್ಯಾಯಪೀಠವು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮುಂದಿನ ನಾಲ್ಕು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದೆ. ಹೀಗಾಗಿ ರಾಜ್ಯದಲ್ಲಿ ನಾಯಿ ಕಚ್ಚಿ ಗಾಯವಾದ್ರೇ 5,000 ಹಾಗೂ ಸಾವನ್ನಪ್ಪಿದ್ರೇ 5 ಲಕ್ಷ ಪರಿಹಾರ ನೀಡುವಂತ ಕ್ರಮ ಶೀಘ್ರವೇ ಜಾರಿಯಾಗಲಿದೆ.