ಬೆಳ್ತಂಗಡಿ: ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಎಸ್.ಆರ್. ಬಾರ್ ಬಳಿ ಭಾರತ್ ಬ್ರಾಂಡ್ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಲಾರಿ ಒಂದನ್ನು ಸ್ಥಳೀಯರು ತಡೆ ಹಿಡಿದಿದ್ದಾರೆ. ಪಿ.ಕೆ.ಮಳಗಿ ಆಟ್ರೊ ಟೆಕ್ ಎಂಬ ಬೋರ್ಡ್ ಹೊಂದಿರುವ ಕೆಎ27 ಸಿ6204 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಭಾರತ್ ಅಕ್ಕಿ ಮೂಟೆಗಳಿದ್ದು, ಕೆ.ಜಿ.ಗೆ 29 ರೂ.ನಂತೆ ಮಾರಾಟ ಮಾಡಲಾಗುತ್ತಿದ್ದು, ಇದನ್ನು ನೋಡಿ ಅನುಮಾನಗೊಂಡು ಸ್ಥಳೀಯರು ವಾಹನವನ್ನುತಡೆದಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಪೃಥ್ವಿಸಾನಿಕಂ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿಯನ್ನು ಬೆಳ್ತಂಗಡಿ ಠಾಣೆಗೆ ಕೊಂಡೊಯ್ಯುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಈ ವೇಳೆ ಲಾರಿಯಲ್ಲಿದ್ದ ಸಿಬ್ಬಂದಿ, ತಾವು ಅಧಿಕೃತವಾಗಿಯೇ ಅಕ್ಕಿ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ನಾಫೆಡ್ (ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ)ನ ರಶೀದಿಯನ್ನೂ ಅಕ್ಕಿ ಖರೀದಿಸಿದ ಗ್ರಾಹಕರಿಗೆ ಲಾರಿಯವರು ನೀಡುತ್ತಿದ್ದು, ಇದು ಅಧಿಕೃತ ಎಂದು ವಾದಿಸಿದ್ದು, ಇದು ಮೇಲ್ನೋಟಕ್ಕೆ ಅಧಿಕೃತ ವಾಗಿರುವಂತೆ ಕಂಡು ಬರುತ್ತಿದೆ. ತನಿಖೆ ನಡೆಸಿ, ಸತ್ಯಾಂಶ ಕಂಡು ಕೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.