March 14, 2026
WhatsApp Image 2023-07-15 at 6.20.33 PM

ಸುಳ್ಯ: ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರುಹತ್ಯೆ ಪ್ರಕರಣದ ಆರೋಪಿಗಳು ಶರಣಾಗಬೇಕು ಎನ್ನುವ ಎಚ್ಚರಿಕೆಯ ಸಂದೇಶವನ್ನು ಸುಳ್ಯದಲ್ಲಿ ಮತ್ತೊಮ್ಮೆ ಎನ್‌ಐಎ ಹೊರಡಿಸಿದೆ. ಇದು ತಲೆಮರೆಸಿಕೊಂಡಿರುವ ಹಂತಕರಿಗೆ ಎರಡನೇ ಎಚ್ಚರಿಕೆಯ ಸಂದೇಶವಾಗಿದೆ. ಈ ಎಚ್ಚರಿಕೆಗೂ ಬಗ್ಗದಿದ್ದರೆ ಮೂರನೇಯ ಎಚ್ಚರಿಕೆಯ ಸಂದೇಶವನ್ನು ಹೊರಡಿಸಲಾಗುತ್ತದೆ. ಆ ಎಚ್ಚರಿಕೆಯ ಸಂದೇಶದಲ್ಲೂ ಶರಣಾಗದೆ ಹೋದರೆ ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿಪಾಸ್ತಿಗಳನ್ನು ಎನ್‌ಐಎ ಮುಟ್ಟುಗೋಲು ಹಾಕಿಕೊಳ್ಳಲಿದೆ ಅನ್ನುವ ಮಾಹಿತಿ ಸಿಕ್ಕಿದೆ. ಆಗಸ್ಟ್‌ 18ರೊಳಗೆ ಶರಣಾಗಲೇಬೇಕು ಎಂದು ಸೂಚಿಸಿದೆ. ಈ ಹಿಂದೆ ಜೂ.30ರೊಳಗೆ ಶರಣಾಗಬೇಕು. ಇಲ್ಲದೇ ಹೋದಲ್ಲಿ ಅವರ ಮನೆಯನ್ನು ಜಪ್ತಿ ಮಾಡುವುದಾಗಿ ಎನ್‌ಐಎ ಅಧಿಕಾರಿಗಳು ಧ್ವನಿ ವರ್ಧಕದ ಮೂಲಕ ತಿಳಿಸಿದ್ದರು. ಆದರೆ ಇದುವರೆಗೆ ಪ್ರವೀಣ್ ನೆಟ್ಟಾರು ಹಂತಕರು ಶರಣಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಹಿಂದೆ ಎನ್‌ಐಎ ಅಧಿಕಾರಿಗಳು ಸುಳ್ಯ ನಗರದಲ್ಲಿ ಸಾರ್ವಜನಿಕವಾಗಿ ಧ್ವನಿವರ್ಧಕದ ಮೂಲಕ ಅನೌನ್ಸ್‌ ಮಾಡುತ್ತಿದ್ದು, ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಸುಳ್ಯದ ಕಲ್ಲುಮುಟ್ಲುನಲ್ಲಿ ವಾಸವಿದ್ದ ಆರೋಪಿ ಉಮ್ಮರ್ ಫಾರೂಕ್ ಅವರ ಮನೆಗೂ ಹೋಗಿ ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿ ಬರಲಾಗಿದೆ. ಜೊತೆಗೆ ಬೆಳ್ಳಾರೆಯಲ್ಲಿಯೂ ಧ್ವನಿವರ್ಧಕದ ಮೂಲಕ ಎನ್‌ಐಎ ನ್ಯಾಯಾಲಯದ ಆದೇಶವನ್ನು ಉದ್ಘೋಷಣೆ ಮಾಡಿ ಆರೋಪಿ ಮುಸ್ತಫರವರ ಮನೆಗೂ ಹೋಗಿ ಆದೇಶ ಪ್ರತಿ ಅಂಟಿಸಿ ಬಂದಿದ್ದರು. ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ(Bellare) ಸಮೀಪ ಪ್ರವೀಣ್ ನೆಟ್ಟಾರು ಅವರನ್ನು ಭೀಕರವಾಗಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು.

About The Author

Leave a Reply

Your email address will not be published. Required fields are marked *

You cannot copy content of this page.