ಕೋಟ: ತಂದೆ ಮತ್ತು ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿಯೊಬ್ಬಳು ಕಾರಿನಲ್ಲಿ ಉಸಿರುಗಟ್ಟಿ ಸಾವನಪ್ಪಿದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮೃತ ಮಗುವನ್ನು ಕೋಟಾದ ಇಂದ್ರ ಕಾಲೋನಿಯ ನಿವಾಸಿ ಪ್ರದೀಪ್ ಅವರ ಮಗಳು ಗರ್ವಿ (3) ಎಂದು ಗುರುತಿಸಲಾಗಿದೆ.
ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ತಾಯಿ ತನ್ನ ಇನ್ನೊಬ್ಬ ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಆದರೆ ಬಾಲಕಿ ಗರ್ವಿ ಮಾತ್ರ ಕಾರಿನಲ್ಲೇ ಇದ್ದಳು. ಇತ್ತ ತಂದೆ ಕಾರನ್ನು ಪಾರ್ಕ್ ಮಾಡಿ, ಮಗು ಗರ್ವಿ ಕೂಡ ಅವಳ ತಾಯಿಯ ಜೊತೆ ತೆರಳಿದೆ ಎಂದು ತಿಳಿದು ಕಾರನ್ನು ಲಾಕ್ ಮಾಡಿ ತೆರಳಿದ್ದರು.
ಮದುವೆ ಸಮಾರಂಭದಲ್ಲಿ ಗಂಡ ಹೆಂಡತಿ ಇಬ್ಬರು ಮೈಮರೆತಿದ್ದು, ಬ್ಯುಸಿಯಲ್ಲಿ ಯಾರೂ ತಮ್ಮ ಇನ್ನೊಂದು ಮಗುವಿನ ಬಗ್ಗೆ ಚಿಂತಿಸದೆ ಇದ್ದರು. ಸುಮಾರು ಎರಡು ಗಂಟೆಗಳ ಬಳಿಕ ಪೋಷಕರಿಗೆ ಮಗು ಇಲ್ಲದ ಬಗ್ಗೆ ತಿಳಿದು ಬಂದಿದ್ದು, ಇಡೀ ಮದುವೆ ಸಭಾಂಗಣ ಹುಡುಕಾಡಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು, ಮಗು ಅಷ್ಟರಲ್ಲೇ ಸಾವನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಾವನಪ್ಪಿದ ಬಾಲಕಿ ಗರ್ವಿಯ ಹುಟ್ಟುಹಬ್ಬವನ್ನು ಮೇ 4 ರಂದು ಆಚರಿಸಲಾಗಿತ್ತು, ಮಗುವನ್ನು ಕಳೆದುಕೊಂಡ ಕುಟುಂಬ ಆಕ್ರಂದನ ಮುಗಿಲುಮುಟ್ಟಿತ್ತು. ತಂದೆಯ ತಾಯಿಯ ಸಣ್ಣ ನಿರ್ಲಕ್ಷಕ್ಕೆ ಪುಟ್ಟ ಮಗು ತನ್ನ ಜೀವವನ್ನು ಬಲಿ ಕೊಟ್ಟಿದೆ.