

ಬೆಂಗಳೂರು : ಇಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದ್ದು, ಬಿಜೆಪಿ ಸರ್ಕಾರದ ಬಹುತೇಕ ಕಾಯ್ದೆಗಳಿಗೆ ಕೊಕ್ ನೀಡಲಾಗಿದೆ.
ಅದ್ರಂತೆ, ಹಿಂದಿನ ಬಿಜೆಪಿ ಸರ್ಕಾರ ಪರಿಚಯಿಸಿದ ಮತಾಂತರ ವಿರೋಧಿ ಕಾನೂನನ್ನ ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಇನ್ನು ಶಾಲಾ ಪಠ್ಯ ಪರಿಷ್ಕರಣೆಯ ಅಂತಿಮ ವರದಿ ಸಿದ್ಧವಾಗಿದ್ದು, ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್ ಮತ್ತು ಇತರರ ಶಾಲಾ ಪಠ್ಯಪುಸ್ತಕ ಪಾಠಗಳನ್ನ ತೆಗೆದುಹಾಕಲು ಕ್ಯಾಬಿನೆಟ್ ನಿರ್ಧರಿಸಿದೆ.
ಇನ್ನು ಇನ್ನೊಂದು ಮಹತ್ವದ ನಿರ್ಧಾರ ಎನ್ನುವಂತೆ, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನ ಓದುವುದನ್ನ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.
ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದು, ‘ ಪಠ್ಯ ಪುಸ್ತಕ ಪರಿಷ್ಕರಣೆ ಅಂತಿಮ ವರದಿ ಸಿದ್ಧಗೊಂಡಿದ್ದು, ಅದಷ್ಟು ಬೇಗ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆ. ಕನ್ನಡದಲ್ಲಿ 6ರಿಂದ 10 ತರಗತಿವರೆಗೆ ಕೆಲವು ಬದಲಾವಣೆ ಮಾಡಲಾಗುತ್ತೆ. ಇನ್ನು ಸಮಾಜ ವಿಜ್ಞಾನದಲ್ಲಿ 6 ರಿಂದ 10ನೇ ತರಗತಿವರೆಗೆ ಕೆಲವು ಬದಲಾವಣೆ ತರಲಾಗುತ್ತೆ ಎಂದರು.
ಅದ್ರಂತೆ, ‘ಪಠ್ಯ ಪುಸ್ತಕದಲ್ಲಿ ಸಾವಿತ್ರಿ ಫುಲೆ ವಿಚಾರ, ನೀ ಹೋದ ಮರು ದಿನ ವಿಚಾರ ಮರುಸೇರ್ಪಡೆ ಮಾಡಲಿದ್ದು, ನೆಹರು ಪುತ್ರಿ ಇಂದಿರಾ ಬರೆದಿದ್ದ ‘ನೀ ಬರೆದ ಪತ್ರ’ ಮರು ಸೇರ್ಪಡೆ ಮಾಡಲಾಗುವುದು’ ಎಂದು ಹೇಳಿದರು.
ಮಾತು ಮುಂದುವರೆಸಿದ ಸಚಿವರು, ‘ಆರ್‍ಎಸ್‍ಎಸ್‍ಸಂಸ್ಥಾಪಕ ಕೇಶವ ಹೆಡ್ಗೇವಾರ್ ಭಾಷಣ ತೆಗೆದಿದ್ದೇವೆ. ಸಾರ್ವಕರ್ , ಚಕ್ರವರ್ತಿ ಸೂಲಿಬೆಲೆ ಬರೆದ ಅಂಶಗಳನ್ನ ತೆಗೆದಿದ್ದೇವೆ. ಯಾಕಂದ್ರೆ, ಮಕ್ಕಳು ಸರಿಯಾದ ವಿಚಾರ ಕಲಿಯಬೇಕೆಂದು ಕೆಲ ಬದಲಾವಣೆ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಗೊಳಿಸಿದೆ.
ಈ ಕುರಿತು ವಿಧಾನಸೌಧದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ನೀಡಿದ್ದು, ‘ಸಂವಿಧಾನ ಭಾರತದ 140 ಕೋಟಿ ಜನರ ಹಕ್ಕು ಸಂರಕ್ಷಿಸುವ ಗ್ರಂಥವಾಗಿದೆ. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯವಾಗಿದ್ದು, ಪ್ರತಿಯೊಬ್ಬರಿಗೂ ಸಮಾನತೆ, ಭ್ರಾತೃತ್ವ ಹೊಂದಲು ಪೀಠಿಕೆ ಕಾರಣವಾಗುತ್ತೆ’ ಎಂದರು. ಇನ್ನು ರಾಜ್ಯದ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಫೋಟೋ ಅಳವಡಿಸಬೇಕು ಎಂದು ಹೇಳಿದರು.
ಸಚಿವ ಸಂಪುಟ ತೆಗೆದುಕೊಂಡ ಮಹತ್ವದ ನಿರ್ಧಾರಗಳ ಪಟ್ಟಿ ಇಂತಿದೆ.!
1. ಪಠ್ಯ ಪರಿಷ್ಕರಣೆಗೆ ಸಂಪುಟ ಸಭೆಯಲ್ಲಿ ನಿರ್ಧಾರ
2. ಮತಾಂತರ ನಿಷೇಧ ಕಾಯ್ದೆ ವಾಪಸ್’ಗೆ ತೀರ್ಮಾನ
3. ಎಪಿಎಂಸಿ ಕಾಯ್ದೆ ರದ್ದತಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ
4. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಅಧಿನಿಯಮ ರದ್ದು
5. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ