ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ 31 ವರ್ಷದ ವ್ಯಕ್ತಿ ಹಾಗೂ ಆತನ ಪ್ರೇಯಸಿ ಒಟ್ಟಿಗೆ ಸಾಯಲು ನಿರ್ಧರಿಸಿದ್ದು, ದುರಾದೃಷ್ಟವೆಂಬಂತೆ ನೇಣಿಗೆ ಕೊರಳೊಡ್ಡಿದ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿನ ಭಯದಿಂದ ಹಿಂದೆ ಸರಿದ ಪ್ರೇಯಸಿ ಕೊನೆ ಕ್ಷಣದಲ್ಲಿ ತನ್ನ ಪ್ರಾಣ ಉಳಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಇಬ್ಬರು ಪ್ರೇಮಿಗಳು ಒಟ್ಟಿಗೆ ಸಾಯಲು ನಿರ್ಧರಿಸಿ ಹೋಟೆಲೊಂದರಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಒಂದಷ್ಟು ಔಷಧಿಯನ್ನೂ ಸೇವಿಸಿ ಸಾಯಲು ಮುಂದಾಗಿದ್ದಾರೆ. ನೇಣಿಗೆ ಕೊರಳೊಡ್ಡಿದ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿಗೆ ಹೆದರಿ ಹಿಂದೆ ಸರಿದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಸೋಮವಾರ ರಾತ್ರಿ ಹೋಟೆಲ್ ರೂಮ್‌ನಿಂದ ಯುವತಿ ಅಳುವ ಸದ್ದು ಕೇಳಿ ಅಲ್ಲಿನ ಸಿಬ್ಬಂದಿಗಳು ರೂಮ್ ಬಾಗಿಲು ತೆಗೆದು ನೋಡಿದಾಗ ವ್ಯಕ್ತಿಯ ಮೃತದೇಹ ನೇತಾಡುತ್ತಿರುವುದು ಕಂಡುಬಂದಿದೆ. ಇನ್ನೂ, ಯುವತಿಯ ಕಿವಿಯಿಂದ ರಕ್ತ ಸೋರುತ್ತಿರುವುದನ್ನು ನೋಡಿದ ಸಿಬ್ಬಂದಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದು, ವಿಚಾರಣೆ ವೇಳೆ ಯುವತಿ ನಡೆದ ವಿಚಾರವನ್ನು ತಿಳಿಸಿದ್ದಾಳೆ. ತಿರುವನಂತಪುರಂ ನಿವಾಸಿಯಾಗಿರುವ ಯುವತಿ ತಾನು ಮತ್ತು ತನ್ನ ಪ್ರೇಮಿ ಒಟ್ಟಿಗೆ ಸಾಯಲು ನಿರ್ಧರಿಸಿದ್ದೆವು. ಹೀಗಾಗಿ ಹೋಟೆಲ್ ರೂಮ್ ಬುಕ್ ಮಾಡಿಕೊಂಡಿದ್ದೆವು ಎಂದು ತಿಳಿಸಿದ್ದು, ಭಾನುವಾರ ಈ ಜೋಡಿಗಳು ಹೋಟೆಲ್‌ಗೆ ಬಂದಿದ್ದಾರೆ.
ಯುವತಿ ಭಾನುವಾರ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವಳ ಕುಟುಂಬದವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ.