ಬೆಳ್ತಂಗಡಿ: ಜರ್ಮನಿಯಲ್ಲಿಯೇ ಎಂಎಸ್ಸಿ ಪೂರೈಸಿ, ಅಲ್ಲಿಯೇ ಸಾಫ್ಟ್ವೇರ್ ಸಂಸ್ಥೆಯನ್ನು ಹುಟ್ಟುಹಾಕಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಅತ್ತಾಜೆ ನಿವಾಸಿ ಆದಿತ್ಯ ಭಟ್ (29) ಎಂಬವರು ಹಠಾತ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಆದಿತ್ಯ ಭಟ್ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಇ ಮುಗಿಸಿ 2020ರಲ್ಲಿ ಜರ್ಮನಿಗೆ ತೆರಳಿ, ಅಲ್ಲಿ ಎಂಎಸ್ಸಿ ಪೂರೈಸಿದ್ದರು. ಬಳಿಕ, ಜರ್ಮನಿ ಪ್ರಜೆ ತನ್ನ ಸಹಪಾಠಿಯ ಜೊತೆಗೆ ಪಾಲುದಾರಿಕೆಯಲ್ಲಿ 2022ರಲ್ಲಿ ಸ್ಟಾರ್ಟ್ಅಪ್ ಕಂಪನಿಯನ್ನು ಶುರು ಮಾಡಿದ್ದರು. 2023ರಲ್ಲಿ ತಮ್ಮ ತಂದೆಗೆ ಆರೋಗ್ಯ ಸರಿಯಿಲ್ಲವೆಂದು ಉಜಿರೆ ಸಮೀಪದ ಅತ್ತಾಜೆಯ ತಮ್ಮ ಮನೆಯಲ್ಲೇ ನೆಲೆಸಿ, ಜರ್ಮನಿಗೆ ವರ್ಕ್ ಫ್ರಂ ಹೋಮ್ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ತಮ್ಮ ತಂದೆ ರಮೇಶ್ ಭಟ್ ಅವರು 30 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಅತ್ತಾಜೆ ಪಾಲಿಮರ್ಸ್ ಹೆಸರಿನ ರಬ್ಬರ್ ಫ್ಯಾಕ್ಟರಿಯಲ್ಲಿಯೂ ಕೆಲಸ ಮಾಡುತ್ತಾ, ತೋಟವನ್ನೂ ನೋಡಿಕೊಳ್ಳುತ್ತಿದ್ದರು. ಶುಕ್ರವಾರ ಸಂಜೆ ವೇಳೆ ಆದಿತ್ಯ ಭಟ್ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ. ಆದಿತ್ಯ ಭಟ್ ಅವರಿಗೆ 2ದಿನಗಳ ಹಿಂದೆಯೇ ಎದೆನೋವು ಕಾಣಿಸಿಕೊಂಡಿತ್ತು. ಆದರೆ ಗ್ಯಾಸ್ ಟ್ರಬಲ್ ಎಂದು ಮನೆಯಲ್ಲೇ ಮದ್ದು ಮಾಡಿದ್ದರು. ಈ ನಿರ್ಲಕ್ಷ್ಯದಿಂದ ಅವರು ಬಾರದಲೋಕಕ್ಕೆ ಪ್ರಯಾಣಿಸಿದ್ದಾರೆ. ಆದಿತ್ಯ ಭಟ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಮುಂದಿನ ಡಿಸೆಂಬರ್ನಲ್ಲಿ ಮದುವೆಯ ಸಿದ್ಧತೆಯೂ ನಡೆದಿತ್ತು.