

ಉಳ್ಳಾಲ: ರೌಡಿಗಳಿಗೆಲ್ಲ ಮನೆಯನ್ನ ಬಾಡಿಗೆ ನೀಡಬೇಡಿ ಎಂದು ಸಂಬಂಧಿಕರಲ್ಲಿ ಹೇಳಿದ ವ್ಯಕ್ತಿಯ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನೆತ್ತಿಲಪದವು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ನೆತ್ತಿಲಪದವು ನಿವಾಸಿ ಮನ್ಸೂರ್ (40) ಎಂಬುವರ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಲಾಗಿದೆ. ಉಳ್ಳಾಲದ ನಟೋರಿಯಸ್ ಟಾರ್ಗೆಟ್ ತಂಡದ ಕೋಟೆಪುರ ನಿವಾಸಿ ನಮೀರ್ ಹಂಝ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು, ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದಾನೆ. ನಮೀರ್ ಹಂಝ ತನ್ನ ಸಹೋದರನಿಗೆ ಬಾಡಿಗೆ ಮನೆ ನೋಡಲೆಂದು ನೆತ್ತಿಲಪದವು ಬಳಿಯ ಮನ್ಸೂರ್ ಸಂಬಂಧಿಕರ ಮನೆಗೆ ಬಂದಿದ್ದ. ಈ ವೇಳೆ ಮನ್ಸೂರ್ ರೌಡಿಗಳಿಗೆ ಬಾಡಿಗೆ ಮನೆ ನೀಡದಂತೆ ಸಂಬಂಧಿಗಳಿಗೆ ತಿಳಿಸಿದ್ದರಂತೆ. ಪರಿಣಾಮ ಮನ್ಸೂರ್ ಹಾಗೂ ನಮೀರ್ ಹಂಝ ತಂಡಗಳ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಹೊಡೆದಾಡಿದ್ದಾರೆ. ಕುಪಿತಗೊಂಡ ನಮೀರ್ ಕತ್ತಿಯಿಂದ ಮನ್ಸೂರ್ ಕೈಗೆ ಕಡಿದು ಕೊಲೆಗೆ ಯತ್ನಿಸಿದ್ದಾನೆ. ಗಾಯಾಳು ಮನ್ಸೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದಲ್ಲಿ ಹನಿಟ್ರ್ಯಾಪ್, ಮುಕ್ಕಚ್ಚೇರಿಯಲ್ಲಿ ಬಿಜೆಪಿ ಕಾರ್ಯಕರ್ತ ಜುಬೈರ್ ಹತ್ಯೆ ಸೇರಿದಂತೆ ಅನೇಕ ಕೊಲೆಯತ್ನ, ಹಲ್ಲೆ ಪ್ರಕರಣಗಳಲ್ಲಿ ಟಾರ್ಗೆಟ್ ತಂಡ ಸಕ್ರಿಯವಾಗಿ ಸದ್ದು ಮಾಡಿತ್ತು. ತಂಡದ ಪ್ರಮುಖ ಇಲ್ಯಾಸ್ ಕೊಲೆ ನಂತರ ಟಾರ್ಗೆಟ್ ತಂಡ ಸೈಲೆಂಟಾಗಿ ಕುಕೃತ್ಯಗಳು ಕಡಿಮೆಯಾಗಿತ್ತು.ಇದೇ ತಂಡದಲ್ಲಿದ್ದುಕೊಂಡ ನಮೀನ್ ಹಂಝ ಕೂಡಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.