ಉಡುಪಿ: ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮಾವಣೆಗೊಂಡಿರುವುದನ್ನು ಗಮನಿಸಿದ ವಂಚಕರು ಆನ್‌ಲೈನ್ ಮೂಲಕ 1 ಲಕ್ಷ ರೂ. ಲಪಟಾಯಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಹರೀಶ್ ಎಸ್. (55) ಎಸ್.ಬಿ.ಐ. ಬ್ಯಾಂಕ್ ಉಡುಪಿ ಟ್ರಜರಿ ಬ್ರಾಂಚ್‌ನಲ್ಲಿ ಎಸ್‌ಬಿ ಖಾತೆ ಹೊಂದಿದ್ದಾರೆ. ಅವರ ಖಾತೆಗೆ ಇಲಾಖೆಯ ಕೆ.ಜಿ.ಐ.ಡಿ. ಹಣ ಜಮೆಗೊಂಡಿರುವುದನ್ನು ಗಮನಿಸಿದ ವಂಚಕರು ಶನಿವಾರ ಮೊಬೈಲ್‌ಗೆ ಲಿಂಕ್ ಕಳುಹಿಸಿ ಬ್ಯಾಂಕ್ ವಿವರ ಪಡೆದು ಖಾತೆಯಿಂದ ಕ್ರಮವಾಗಿ 1499 ರೂ. ಮತ್ತು 98,500 ರೂ. ಸೇರಿ ಒಟ್ಟು ರೂಪಾಯಿ 99,999 ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.