ನವದೆಹಲಿ: ನಟಿ ರಾಖಿ ಸಾವಂತ್ ಹಾಗೂ ಮೈಸೂರು ಮೂಲದ ಆದಿಲ್ ದುರಾನಿ ಅವರ ರಹಸ್ಯ ಮದುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಿವಾಹ ಹಿನ್ನೆಲೆಯಲ್ಲಿ ರಾಖಿ ಸಾವಂತ್ ಅವರು, ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ರಾಖಿಯಿಂದ ಫಾತಿಮಾಗೆ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಮದುವೆಯ ಸುದ್ದಿಯನ್ನು ಆದಿಲ್ ದುರಾನಿ ತಳ್ಳಿ ಹಾಕಿದ್ದಾರೆ.
ತನ್ನ ಬಹುಕಾಲದ ಗೆಳೆಯ, ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಜೊತೆಗಿನ ಮದುವೆಯ ಸಮಯದಲ್ಲಿ, ರಾಖಿ ಸಾವಂತ್ ತನ್ನ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದಾರೆ. ವಿಶೇಷ ಮದುವೆ ಪ್ರಮಾಣಪತ್ರದ ಪ್ರಕಾರ, ರಾಖಿ ಸಾವಂತ್ ಅವರು ಫಾತಿಮಾ ಆಗಿ ಬದಲಾಗಿದ್ದಾರೆ. ಇದಕ್ಕೂ ಮೊದಲು, ಬುಧವಾರ ರಾಖಿ ವಧುವಿನ ಡ್ರೆಸ್‌ನಲ್ಲಿ ಮತ್ತು ಆದಿಲ್ ಖಾನ್ ಅವರು ವರನ ಡ್ರೆಸ್‌ನಲ್ಲಿರುವ ಫೋಟೋ ವೈರಲ್ ಆಗಿತ್ತು. ಅಲ್ಲದೇ, ಅವರಿಬ್ಬರೂ ಮದುವೆಯಾಗಿದ್ದಾರೆಂಬುದು ಖಚಿತವಾಗಿತ್ತು. ಆದರೆ, ಈ ಎಲ್ಲ ಬೆಳವಣಿಗೆಗಳನ್ನು ಆದಿಲ್ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ರಾಖಿ ಸಾವಂತ್ ಮತ್ತು ಆದಿಲ್ ದುರಾನಿ ಹಲವು ದಿನಗಳಿಂದ ಮೀಡಿಯಾ ಗಮನ ಸೆಳೆಯುತ್ತಿದ್ದಾರೆ. ರಿತೇಶ್ ಜೊತೆಗಿನ ಬೇರ್ಪಟ್ಟ ನಂತರ ರಾಖಿ, ತಾನು ಮತ್ತೆ ಪ್ರೀತಿಸುತ್ತಿರುವ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಹೊರ ಜಗತ್ತಿಗೆ ತಮ್ಮ ಸಂಬಂಧವನ್ನು ಖಚಿತಪಡಿಸಿದ ಬಳಿಕ ಆದಿಲ್ ಹಾಗೂ ರಾಖಿ ಇಬ್ಬರು ಒಟ್ಟಿಗೆ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ.