March 18, 2026
WhatsApp Image 2024-07-12 at 12.19.33 PM

ಕುಂದಾಪುರ: ಖಾಸಗಿ ಬಸ್ ಹಾಗೂ ಬೈಕ್‌ನ ನಡುವೆ ಭೀಕರ ಅಪಘಾತದಲ್ಲಿ ಬೈಕ್ ಸವಾರ ಕುಂದಾಪುರದ ಪುರಸಭೆಯ ಪೌರ ಕಾರ್ಮಿಕ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದುರ್ಗಾಂಬ ಬಸ್ ಡಿಪೋ ಎದುರುಗಡೆ ನಡೆದಿದೆ. ಬಾರ್ಕೂರಿನ ಬಂಡಿ ಮಠ ನಿವಾಸಿ ಶಂಕರ ಹಾಗೂ ಬೀಚು ಎಂಬುವರ ಪುತ್ರ ಸುಂದರ್ (39) ಮೃತ ಕುಂದಾಪುರದ ಪೌರಕಾರ್ಮಿಕ ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕುಂದಾಪುರದ ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸುಂದರ್, ಗುರುವಾರ ಸಂಜೆ ತನ್ನ ಮನೆಯಾದ ಬಂಡಿಮಠದಿಂದ ಬೈಕ್‌ನಲ್ಲಿ ಕುಂದಾಪುರಕ್ಕೆ ವಾಪಸ್ ಬರುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರಿನ ದುರ್ಗಾಂಬ ಬಸ್ ಡಿಪೋ ಎದುರುಗಡೆ ಹೆದ್ದಾರಿಯಿಂದ ಸರ್ವಿಸ್ ರಸ್ತೆ ಕಡೆಗೆ ಬೈಕನ್ನು ತಿರುಗಿಸುತ್ತಿದ್ದಾಗ ಕುಂದಾಪುರದಿಂದ ಡಿಪೋಗೆ ಆಗಮಿಸುತ್ತಿದ್ದ ದುರ್ಗಾಂಬ ಬಸ್ ಹೆದ್ದಾರಿಯಿಂದ ತಿರುವು ಪಡೆದುಕೊಳ್ಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಬಸ್‌ನ ಅಡಿಗೆ ಬಿದ್ದು ಬೈಕ್ ಸವಾರ ಸುಂದರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಸುಂದರ್ ಖಾಯಂ ಪೌರಕಾರ್ಮಿಕರಾಗಿ ನೇಮಕಗೊಂಡಿದ್ದರು. ಸುಂದರವರ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದುರ್ಗಾಂಬ ಬಸ್ ಡಿಪೋದ ಎದುರುಗಡೆ ಡಿವೈಡರ್ ನಿರ್ಮಿಸಿರುವುದು ಅವೈಜ್ಞಾನಿಕ ಎಂಬುದಾಗಿ ಈ ಹಿಂದಿನಿಂದಲೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅಪಘಾತದಿಂದ ಪೌರಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.