ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಹೊಟೇಲ್ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಮೇಲೆ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಕಾಟ ಹೆಚ್ಚಾಗುತ್ತಿದ್ದು, ಎಚ್ಎಲ್ ಕುಂದನಹಳ್ಳಿ ಗೇಟ್ ಬಳಿ, ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಯುವಕರ ಮೇಲೆ ರೌಡಿಗಳ ಗುಂಪೊಂದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕರನ್ನು ಬೈಂದೂರು ಮೂಲದ ನವೀನ್ ಹಾಗೂ ಪ್ರಜ್ವಲ್ ಎಂದು ಗುರುತಿಸಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ರಹ್ಮಲಿಂಗೇಶ್ವರ ಬೇಕರಿ ಬೈಂದೂರಿನ ಯುವಕರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನಾಲ್ಕೈದು ಜನರಿಂದ ಯುವಕರ ಗುಂಪೊಂದು ಬಂದು ಸಿಗರೇಟ್ ಖರೀದಿಸಿ, ಹಣ ಪಾವತಿಸದೆ ಸುಮ್ಮನಾಗಿದ್ದಾರೆ. ಹಣ ಕೊಡಿ ಎಂದು ಅಂಗಡಿಯಾತ ಕೇಳಿದಾಗ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ನಿಮ್ಮ ಓನರ್ ಯಾರು? ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಉತ್ತರವಾಗಿ, ಅಂಗಡಿ ಮಾಲೀಕ ಊರಿನಲ್ಲಿ ಇದ್ದಾನೆ ಎಂದಿದ್ದಾನೆ. ಈ ವೇಳೆ ಮತ್ತೊಬ್ಬ ಯುವಕ ಏಕಾಏಕಿ ಅಂಗಡಿಯೊಳಗೆ ನುಗ್ಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಅಂಗಡಿಯೊಳಗಿದ್ದ ಇನ್ನೊಬ್ಬ ಯುವಕ, ತಡೆಯಲು ಬಂದಾಗ ಆತನ ಮೇಲೂ ಹಲ್ಲೆ ಮಾಡಿದ್ದಾರೆ.
ಇಷ್ಟಾಗುತ್ತಿದ್ದಂತೆ ಯುವಕರ ಗುಂಪು ಅಂಗಡಿಯೊಳಗೆ ನುಗ್ಗಿ, ಅಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ಹೆಲ್ಮೆಟ್ ಮುಂತಾದ ವಸ್ತುಗಳಿಂದ ಥಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಅಂಗಡಿಯಲ್ಲಿದ್ದ ಅಮಾಯಕ ಹುಡುಗರ ಮುಖ ಹಾಗೂ ಹೊಟ್ಟೆಯ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಇವರ ಪುಂಡಾಟಿಕೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೇಕರಿಯಲ್ಲಿದ್ದ ನವೀನ್ ಹಾಗೂ ಪ್ರಜ್ವಲ್ಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ಸದ್ಯ ಪುಂಡಾಟಿಕೆ ಮೆರೆದ ಆರೋಪಿಗಳ ಮೇಲೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಂದೂರು ಯುವಕರಾದ ನವೀನ್ ಹಾಗೂ ಪ್ರಜ್ವಲ್ ಮೇಲೆ ಅನಗತ್ಯವಾಗಿ ಪುಡಿ ರೌಡಿಗಳು ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಯುವಕರ ಜತೆ ಮಾತನಾಡಿ ವಿವರ ಪಡೆಯಲಾಗಿದೆ. ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಬೆಂಗಳೂರು ಪೋಲಿಸ್ ಕಮೀಷನರ್ ಪ್ರತಾಪ್ ರೆಡ್ಡಿ ಅವರ ಜೊತೆ ಮಾತನಾಡಿ, ಹುಡುಗರಿಗೆ ಆದ ಅನ್ಯಾಯದ ಬಗ್ಗೆ ನ್ಯಾಯ ಒದಗಿಸುವಂತೆ ವಿನಂತಿಸಲಾಗಿದೆ ಎಂದು ಬೈಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದ್ದಾರೆ.