

ಪತಿ ಆದಿಲ್ ಖಾನ್ ಬಗ್ಗೆ ಮತ್ತೊಂದು ಗುರುತರ ಆರೋಪಗಳನ್ನು ಮಾಡಿದ್ದಾರೆ ನಟಿ ರಾಖಿ ಸಾವಂತ್. ತನ್ನ ಬೆತ್ತಲೆ ವಿಡಿಯೋಗಳನ್ನು ಗೊತ್ತಾಗದಂತೆ ಚಿತ್ರೀಕರಿಸಿ, ಹಣಕ್ಕಾಗಿ ಆದಿಲ್ ಮಾರಾಟ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಅಲ್ಲದೇ, ವರದಕ್ಷಿಣೆ ಕಿರುಕುಳ, ದೈಹಿಕ ಕಿರುಕುಳ ಸೇರಿದಂತೆ ಹಲವು ಆಪಾದನೆಗಳನ್ನು ಈಗಾಗಲೇ ರಾಖಿ ತಮ್ಮ ಪತಿಯ ಮೇಲೆ ಮಾಡಿದ್ದಾರೆ. ಬೆತ್ತಲೆ ವಿಡಿಯೋ ಅವರ ಹೊಸ ಆರೋಪವಾಗಿದೆ.
ರಾಖಿ ಸಾವಂತ್ ಹಿಂದೆ ಬಿದ್ದು ಸದ್ಯ ಜೈಲು ಪಾಲಾಗಿರುವ ಆದಿಲ್ ಖಾನ್ ಗೆ ಬಿಗ್ ಬಾಸ್ ಮನೆ ಒಳಗೆ ಹೋಗುವ ಆಸೆ ಇತ್ತಂತೆ. ಹಾಗಾಗಿಯೇ ಅವನು ರಾಖಿ ಸಖ್ಯ ಬೆಳೆಸಿದ್ದ ಎನ್ನುವ ವಿಷಯ ಬಹಿರಂಗವಾಗಿದೆ. ಆದಿಲ್ ಆಪ್ತರು ಹೇಳುವಂತೆ ರಾಖಿ ಹಿಂದೆ ಹೋದರೆ, ಬಿಗ್ ಬಾಸ್ ಮನೆಗೆ ಹೋಗುವ ದಾರಿ ಸುಲಭವಾಗುತ್ತದೆ. ಹೀಗಾಗಿ ರಾಖಿ ಬೆನ್ನು ಬಿದ್ದಿದ್ದ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸ್ವತಃ ರಾಖಿಯೇ ಆದಿಲ್ ಜೊತೆ ಬಿಗ್ ಬಾಸ್ ಮನೆಗೆ ಹೋಗುವುದಾಗಿಯೂ ಮಾತನಾಡಿದ್ದರು.
ಆದಿಲ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ರಾಖಿ ಸಾವಂತ್ ಬಹಿರಂಗ ಪಡಿಸಿದ ಸಂದರ್ಭದಲ್ಲೂ ಬಿಗ್ ಬಾಸ್ ಕುರಿತಾಗಿ ನಟಿ ಮಾತನಾಡಿದ್ದರು. ಬಿಗ್ ಬಾಸ್ ಮನೆಗೆ ಒಟ್ಟಿಗೆ ಹೋಗುವಂತಹ ಅವಕಾಶ ಬಂದರೆ, ಹೋಗುತ್ತೇವೆ ಎಂದಿದ್ದರು. ಅಲ್ಲದೇ, ಬಿಗ್ ಬಾಸ್ ಮನೆಯಲ್ಲೇ ಮದುವೆ ಆಗುವುದಾಗಿಯೂ ತಿಳಿಸಿದ್ದರು. ಆದರೆ, ಕೇವಲ ರಾಖಿಗೆ ಮಾತ್ರ ಮನೆಯ ಪ್ರವೇಶಕ್ಕೆ ಅವಕಾಶ ಸಿಕ್ಕಿತ್ತು. ತಾಯಿಯ ಅನಾರೋಗ್ಯದ ಕಾರಣದಿಂದಾಗಿ ಅವರು ಅರ್ಧಕ್ಕೆ ಬಿಗ್ ಬಾಸ್ ಮನೆಯಿಂದ ವಾಪಸ್ಸಾದರು.