ಹಾಗಲಕಾಯಿ ಅಂದ ಕೂಡಲೇ ಮೊದಲು ನೆನಪಾಗುವುದು ಅದರ ಕಹಿ ರುಚಿ. ಕಹಿಯಾಗಿದ್ದರು ಹಾಗಲಕಾಯಿ ದೇಹದ ಆರೋಗ್ಯ (Healthy Body) ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಧುಮೇಹ (Diabetes) ನಿಯಂತ್ರಣಕ್ಕೆ ಹಾಗಲಕಾಯಿ ರಾಮಬಾಣ. ಹಾಗಲಕಾಯಿಯಲ್ಲಿ ಮಾಡುವ ಖಾದ್ಯಗಳು ಕಹಿಯಾಗಿರುತ್ತದೆ ಎನ್ನುವ ಕಾರಣಕ್ಕೆ ಎಷ್ಟೋ ಮಂದಿ ಅದನ್ನು ತಿನ್ನಲು ಮುಖ ಮುರಿಯುತ್ತಾರೆ.
ಆದರೆ ರುಚಿಕರವಾಗಿ ಹಾಗಲಕಾಯಿ ಚಿಪ್ಸ್ ಮಾಡಿ ನೋಡಿ, ಹಾಗಲಕಾಯಿ ಅಂದರೆ ಮಾರುದ್ದ ಓಡೋರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಅಲ್ಲದೇ ಇದನ್ನು ಕಹಿ ಇಲ್ಲದೇ, ಗರಿಗರಿಯಾಗಿ ಮಾಡಬಹುದು. ಆಗ ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ. ಕಹಿ ರುಚಿಯಿಲ್ಲದೇ, ಸ್ಪೈಸಿ ಹಾಗೂ ಟೇಸ್ಟಿಯಾಗಿ ಹಾಗಲಕಾಯಿ ಚಿಪ್ಸ್ ಹೇಗೆ ಮಾಡುವುದು ಅಂತ ನೋಡೋಣ.
ಹಾಗಲಕಾಯಿ ಚಿಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
- ಹಾಗಲಕಾಯಿ – 2
- ಜೀರಿಗೆ ಪುಡಿ – 1 ಟೀ ಸ್ಪೂನ್
- ಅಚ್ಚಖಾರದಪುಡಿ – 1 ಟೀ ಸ್ಪೂನ್
- ಅರಿಶಿಣಪುಡಿ – ಕಾಲು ಟೀ ಸ್ಪೂನ್
- ಆಮ್‌ಚೂರ್ ಪೌಡರ್ – 1 ಟೀ ಸ್ಪೂನ್
- ನಿಂಬೆಹಣ್ಣಿನ ರಸ – 1 ಟೀ ಸ್ಪೂನ್
- ಕಡಳೇಹಿಟ್ಟು – 1 ಟೀ ಸ್ಪೂನ್
- ಕಾರ್ನ್‌ಪ್ಲೋರ್ – 1 ಟೀ ಸ್ಪೂನ್
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಕರಿಯಲು ಅಗತ್ಯವಿದ್ದಷ್ಟು
ಹಾಗಲಕಾಯಿ ಚಿಪ್ಸ್ ಮಾಡುವ ವಿಧಾನ
- ಮೊದಲಿಗೆ ಹಾಗಲಕಾಯಿಯನ್ನು ರೌಂಡ್ ಆಗಿ ಕಟ್ ಮಾಡಿಕೊಳ್ಳಬೇಕು. ಕಟ್ ಮಾಡುವಾಗ ಹಾಗಲಕಾಯಿಯ ಮಧ್ಯಭಾಗದಲ್ಲಿರುವು ಬೀಜ, ಬಿಳಿಭಾಗವನ್ನು ತೆಗೆದು ಬಿಡಬೇಕು. ಇದನ್ನು ಬೌಲ್‌ಗೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಉಪ್ಪು ಕರಗಿದ ನಂತರ ಇದನ್ನು ನೀರಲ್ಲಿ ತೊಳೆದು, 15 ನಿಮಿಷ ಪಕ್ಕಕ್ಕೆ ಇಡಬೇಕು. 15 ನಿಮಿಷದ ಬಳಿಕ ಹಾಗಲಕಾಯಿಗೆ ಜೀರಿಗೆ ಪುಡಿ 1 ಟೀ ಸ್ಪೂನ್, ಅಚ್ಚಖಾರದಪುಡಿ 1 ಟೀ ಸ್ಪೂನ್, ಅರಿಶಿಣಪುಡಿ ಕಾಲು ಟೀ ಸ್ಪೂನ್, ಆಮ್‌ಚೂರ್ ಪೌಡರ್ 1 ಟೀ ಸ್ಪೂನ್, ನಿಂಬೆಹಣ್ಣಿನ ರಸ 1 ಟೀ ಸ್ಪೂನ್, ಕಡಳೇಹಿಟ್ಟು 1 ಟೀ ಸ್ಪೂನ್, ಕಾರ್ನ್‌ಪ್ಲೋರ್ 1 ಟೀ ಸ್ಪೂನ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಅಗತ್ಯವಿದ್ದರೆ ಸ್ವಲ್ಪ ನೀರು ಬೆರೆಸಿಕೊಳ್ಳಬೇಕು.
- ಸ್ಟೌವ್ ಮೇಲೆ ಬಾಣಲಿ ಇಟ್ಟು ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಹಾಗಲಕಾಯಿ ಪೀಸ್‌ಗಳನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು. ಗೋಲ್ಡನ್ ಬ್ರೌನ್ ಕಲರ್ ಬಂದ ಚಿಪ್ಸ್‌ನ್ನು ಸರ್ವಿಂಗ್ ಬೌಲ್ ಹಾಕಿಕೊಳ್ಳಬೇಕು.
- ಹಾಗಲಕಾಯಿ ಚಿಪ್ಸ್‌ನಲ್ಲಿ ಕಹಿ ಅಂಶ ಕಡಿಮೆ ಇರುತ್ತದೆ. ಸಂಜೆ ಹೊತ್ತಲ್ಲಿ ಟೀ ಅಥವಾ ಕಾಫಿ ಜೊತೆಗೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.