
ಬೆಳ್ತಂಗಡಿ : ತಾಲೂಕಿನ ಮಚ್ಚಿನ ಗ್ರಾಮದ ಬಳ್ಳಮಂಜ ಎಂಬಲ್ಲಿ ಪುರೋಹಿತರೊಬ್ಬರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅಂದಾಜು 19,32,800 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿದ್ದಾರೆ. ಹೊಸಮನೆ ನಿವಾಸಿ ಡಿ. ಮುರಳಿ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ.
ಮುರಳಿ ಅವರು ಭಾನುವಾರ (ಏಪ್ರಿಲ್ 5) ಸಂಜೆ ಕುಟುಂಬದೊಂದಿಗೆ ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಬ್ರಹ್ಮಕಳಸೋತ್ಸವದ ಜಾತ್ರೆಗೆ ತೆರಳಿದ್ದರು. ಸಂಜೆ 6:40ಕ್ಕೆ ಮನೆಗೆ ಬೀಗ ಹಾಕಿ ತೆರಳಿದ್ದ ಕುಟುಂಬಸ್ಥರು, ಪೂಜೆ ಮುಗಿಸಿ ರಾತ್ರಿ 8:30ಕ್ಕೆ ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಮುಂಬಾಗಿಲ ಬೀಗವನ್ನು ಆಯುಧದಿಂದ ಮುರಿದು ಒಳನುಗ್ಗಿದ ಕಳ್ಳರು, ಬೆಡ್ರೂಂನಲ್ಲಿದ್ದ ಕಪಾಟಿನ ಲಾಕ್ ಒಡೆದು ಚಿನ್ನಾಭರಣಗಳನ್ನು ದೋಚಿದ್ದಾರೆ.
ಸುಮಾರು 136 ಗ್ರಾಂ ತೂಕದ ಚಿನ್ನದ ಚೈನ್, ಬ್ರಾಸ್ಲೆಟ್, ಉಂಗುರಗಳು, ನಕ್ಲೇಸ್ ಸೇರಿದಂತೆ ಸುಮಾರು 13,32,800 ರೂಪಾಯಿ ಮೌಲ್ಯದ ಆಭರಣಗಳು ಹಾಗೂ ಕೃಷಿ ಮತ್ತು ವೈದಿಕ ವೃತ್ತಿಯಿಂದ ಕೂಡಿಟ್ಟಿದ್ದ ಒಟ್ಟು 6 ಲಕ್ಷ ರೂಪಾಯಿ ನಗದು ಹಣವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (ಅ.ಕ್ರ 38/2026, ಕಲಂ: 331(3), 331(4), 305 BNS), ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
