
ವಿಜಯನಗರದ ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಜಾತ್ರೆಗೆ ಬಂದಿದ್ದ ಗೃಹಿಣಿಯೊಬ್ಬಳು ಪಾಗಲ್ ಪ್ರೇಮಿಯ ಕೈಯಲ್ಲಿ ಕೊಲೆಯಾಗಿ ಹೋಗಿದ್ದಾಳೆ.
ಆರೋಪಿ ಹನುಮಂತ ಮತ್ತು ಕೊಲೆಯಾದ ಪ್ರತಿಭಾ ನಾಗರಾಜ್ ವಿಜಯನಗರ: ವಿಜಯನಗರದ ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಜಾತ್ರೆಗಾಗಿ ಬಂದಿದ್ದ ಗೃಹಿಣಿಯೊಬ್ಬಳು ಪಾಗಲ್ ಪ್ರೇಮಿ ಕೈಯಲ್ಲಿ ಕೊಲೆಯಾಗಿ ಹೋಗಿದ್ದಾಳೆ. ಭಗ್ನ ಪ್ರೇಮಿಯೊಬ್ಬ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪ್ರತಿಭಾ ನಾಗರಾಜ್ (27) ಕೊಲೆಯಾದ ಮೃತ ದುರ್ದೈವಿ.ಚಿರಸ್ತಹಳ್ಳಿಯ ಮೂಕಪ್ಪನವರ ಹನುಮಂತ ಕೊಲೆ ಆರೋಪಿ ಆಗಿದ್ದಾನೆ. ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಗಾಗಿ ಚಿಕ್ಕಮ್ಮನ ಮನೆಗೆ ಬಂದಿದ್ದ ಪ್ರತಿಭಾಳ ಮೇಲೆ ಏಕಾಏಕಿ ಎರಗಿ ದಾಳಿ ಮಾಡಿದ ಹನುಮಂತ, ಬರ್ಬರವಾಗಿ ಕೊಲೆ ಮಾಡಿದ್ದಾನೆ. ತೀವ್ರ ಗಾಯಗೊಂಡಿದ್ದ ಆಕೆಯನ್ನು ಹರಿಹರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ತೀವ್ರ ರಕ್ತಸ್ರಾವವಾಗಿ ಮಾರ್ಗಮಧ್ಯೆಯೇ ಉಸಿರು ಚೆಲ್ಲಿದ್ದಾಳೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ವಿ.ಎಸ್ ಹಾಲಮೂರ್ತಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಮಾಡಿ ಪರಾರಿ ಆಗಿದ್ದ ಹನುಮಂತನನ್ನು ತಾಲೂಕಿನ ನೀಲಗುಂದ ಕ್ರಾಸ್ ಬಳಿ ಬಂಧಿಸಲಾಗಿದೆ. ಬಂಧಿತ ಆರೋಪಿ ಪ್ರತಿಭಾಳನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಎನ್ನಲಾಗಿದೆ. ಪ್ರೀತಿಸಿದವಳು ಸಿಗಲಿಲ್ಲ ಮತ್ತೊಬ್ಬನೊಂದಿಗೆ ಮದುವೆ ಆಗಿದ್ದನ್ನು ಸಹಿಸದ ಪಾಗಲ್ ಪ್ರೇಮಿ, ಆಕೆ ಊರಿಗೆ ಬಂದಾಗ ಈ ಕೃತ್ಯ ಎಸಗಿದ್ದಾನೆಂಬ ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಹಲವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
