
30 ವರ್ಷಗಳಿಂದ ಪಾಕಿಸ್ತಾನದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟುತ್ತಿದ್ದಾರೆ. ಇದೀಗ ಪ್ರಧಾನಿ ಮೋದಿಗಾಗಿ ಎರಡು ರಾಖಿಗಳನ್ನು ಸಿದ್ದಪಡಿಸಿದ್ದು, ಪ್ರಧಾನಿ ಕಚೇರಿಯ ಆಹ್ವಾನಕ್ಕಾಗಿ ಕಾಯುತ್ತಿದ್ದಾರೆ.
ಸಹೋದರಿಯರು ತಮ್ಮ ಸಹೋದರರಿಗೆ ದೀರ್ಘಾಯುಷ್ಯ ಪ್ರಗತಿ ಮತ್ತು ಉತ್ತಮ ಆರೋಗ್ಯವನ್ನು ಬಯಸಿ ರಾಖಿ ಕಟ್ಟುತ್ತಾರೆ. ಆ ದಿನವು ಹಬ್ಬ ಮಾತ್ರವಲ್ಲ, ಸಂಬಂಧದಲ್ಲಿ ಮಾಧುರ್ಯವನ್ನು ಹೆಚ್ಚಿಸುವ ಅವಕಾಶವೂ ಆಗಿದೆ. ಆದ್ದರಿಂದ ಭಾರತ ಸೇರಿದಂತೆ ಇತರ ಹಲವು ದೇಶಗಳಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. 2025ರ ರಕ್ಷಾಬಂಧನ ಆಗಸ್ಟ್ 9ರಂದು ಆಚರಿಸಲಾಗುತ್ತದೆ. ಈ ಬಾರಿ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಆಚರಣೆ ಮಾಡಲಾಗುತ್ತಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಅಣ್ಣ ತಂಗಿಯರ ಬಾಂಧವ್ಯ ಸಾರುವ ಹಬ್ಬಕ್ಕೆ ಮೂರು ದಿನ ಇರುವಾಗಲೇ ಪಾಕ್ ಮೂಲದ ಸಹೋದರಿ ಕಮರ್ ಮೊಹ್ಸಿನ್ ಶೇಖ್ ರಾಖಿ ಕಟ್ಟಲು ಸಿದ್ದತೆ ನಡೆಸಿದ್ದಾರೆ.
ಮೊಹ್ಸಿನ್ ಶೇಖ್ ಯಾರು? ಕಮರ್ ಶೇಖ್ ಪಾಕಿಸ್ತಾನದ ಕರಾಚಿಯಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರು 1981ರಲ್ಲಿ ಮೋಹ್ಸಿನ್ ಶೇಖ್ ಅವರನ್ನು ವಿವಾಹವಾದರು. ಅಂದಿನಿಂದ ಅವರು ಭಾರತದಲ್ಲಿ ನೆಲೆಸಿದ್ದಾರೆ. 1990ರಲ್ಲಿ ಗುಜರಾತ್‌ನ ಅಂದಿನ ರಾಜ್ಯಪಾಲ ದಿವಂಗತ ಡಾ. ಸ್ವರೂಪ್ ಸಿಂಗ್ ಮೂಲಕ ಕಮರ್ ಶೇಖ್ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರಂತೆ.
ರಾಜ್ಯಪಾಲರನ್ನು ಭೇಟಿ ಮಾಡಲು ವಿಮಾನ ನಿಲ್ದಾಣದಿಂದ ಹೊರಟಾಗ ನರೇಂದ್ರ ಮೋದಿ ಅಲ್ಲಿದ್ದರಂತೆ. ಆ ಸಮಯದಲ್ಲಿ ಸ್ವರೂಪ್ ಸಿಂಗ್ ಅವರು, ಕಮರ್ ಶೇಖ್ ತಮ್ಮ ಮಗಳೆಂದು ಮೋದಿಗೆ ಹೇಳಿದ್ದರಂತೆ. ಈ ಮಾತನ್ನು ಕೇಳಿದ ನರೇಂದ್ರ ಮೋದಿಯವರು ಇಂದಿನಿಂದ ಕಮರ್ ಶೇಖ್ ನನ್ನ ಸಹೋದರಿ ಎಂದಿದ್ದರಂತೆ. ಆ ದಿನವೇ ಪ್ರಧಾನಿ ಮೋದಿಯವರನ್ನು ಸಹೋದರ ಎಂದು ಭಾವಿಸಿರುವ ಕಮರ್ ಖೇರ್ ಪ್ರತಿ ವರ್ಷವು ವಿಶೇಷ ರಾಖಿಯನ್ನು ಕಟ್ಟುತ್ತಾ ಬರುತ್ತಿದ್ದಾರೆ.
2024 ರಲ್ಲಿ ರಕ್ಷಾ ಬಂಧನಕ್ಕಾಗಿ ಖಮರ್ ಮೊಹ್ಸಿನ್ ಶೇಖ್ ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಆದರೆ ಈ ವರ್ಷ, ಪ್ರಧಾನಿ ಕಚೇರಿಯಿಂದ ಆಹ್ವಾನ ಬಂದರೆ ಹೋಗಲು ಸಿದ್ದ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಪ್ರಧಾನಿ ಕಚೇರಿ ಅವಕಾಶ ನೀಡುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
