

ಬಂಟ್ವಾಳ: ಅಪ್ರಾಪ್ತ ಬಾಲಕನಿಗೆ ಮದುವೆಗೆ ಸಿದ್ದತೆ ನಡೆಸುತ್ತಿರುವ ವೇಳೆ ಅಧಿಕಾರಿಗಳು ಮನೆಗೆ ದಾಳಿ ನಡೆಸಿ ಮದುವೆ ನಡೆಸದಂತೆ ಕುಟುಂಬಸ್ಥರಿಂದ ಮುಚ್ಚಳಿಕೆ ಬರೆಸಿದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ತೆಂಕಕಜೆಕಾರ್ ಗ್ರಾಮದಲ್ಲಿ ನಡೆದಿದೆ.
ತೆಂಕಕಜೆಕಾರ್ ಗ್ರಾಮದ ಮಿತ್ತಳಿಕೆ ಎಂಬ ಮನೆಯಲ್ಲಿ ಅಪ್ರಾಪ್ತ ಬಾಲಕನೋರ್ವನಿಗೆ ನಾಳೆ ಮಾ.5 ರಂದು ಮದುವೆಯ ಸಕಲಸಿದ್ಧತೆಗಳನ್ನು ನಡೆಸಲಾಗಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿಯಂತೆ ಮನೆಗೆ ಧಾವಿಸಿ, ಮದುವೆ ನಡೆಸದಂತೆ ಮನೆಯವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಎರಡನೇ ಬಾರಿ ಮದುವೆಗೆ ಯತ್ನ ಕಳೆದ ವರ್ಷ ಇದೇ ಹುಡುಗನಿಗೆ ಮದುವೆಗಾಗಿ ಸಕಲ ಸಿದ್ದತೆಗಳು ನಡೆದಿದ್ದು, ಈ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಮನೆಗೆ ಹೋಗಿ ವಿಚಾರ ತಿಳಿಸಿ ಮದುವೆಯನ್ನು ನಿಲ್ಲಿಸಿದ್ದರು. ಇದೀಗ ಎರಡನೇ ಬಾರಿ ಅದೇ ರೀತಿ ಅಪ್ರಾಪ್ತ ಬಾಲಕನಿಗೆ ಮತ್ತೆ ಮದುವೆಗಾಗಿ ತಯಾರಿಯಲ್ಲಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಅವರು ಪುಂಜಾಲಕಟ್ಟೆ ಎಸ್.ಐ.ಆಂಜನೇಯ ರೆಡ್ಡಿ ಹಾಗೂ ಸಿ.ಡಿ.ಪಿ.ಒ. ಇಲಾಖೆಯ ಇತರ ಅಧಿಕಾರಿಗಳೊಂದಿಗೆ ಮನೆಗೆ ತೆರಳಿ ಮದುವೆ ನಿಲ್ಲಿಸಿದ್ದಾರೆ. ಸುಳ್ಳು ಸರ್ಟಿಫಿಕೇಟ್ ರೆಡಿ ಮಾಡಿದ್ದ ಕುಟುಂಬಸ್ಥರು ಕಳೆದ ಬಾರಿ ಅಪ್ರಾಪ್ತ ಬಾಲಕನಿಗೆ ಮದುವೆ ಮಾಡಲು ಅಧಿಕಾರಿಗಳು ಅವಕಾಶ ನೀಡಿಲ್ಲ ಎಂಬ ಕಾರಣಕ್ಕಾಗಿ ಫೋರ್ಜರಿ ಬರ್ತ್ ಸರ್ಟೀಪಿಕೇಟ್ ಸೃಷ್ಟಿಸಿ ಸ್ಥಳಕ್ಕೆ ಬಂದ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ನೋಡಿದ್ದಾರೆ. ಆದರೆ ಅಧಿಕಾರಿಗಳು ಇವರು ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಅದು ಸುಳ್ಳು ದಾಖಲೆ ಪತ್ರಗಳು ಎಂಬುದು ಸಾಬೀತಾಗಿದೆ. ಅ ಬಳಿಕ ಪೋಷಕರಿಗೆ ಕಾನೂನಿನ ಅಡಿಯಲ್ಲಿ ಬರುವ ವಿಚಾರಗಳನ್ನು ಮನವರಿಕೆ ಮಾಡಿದ ಅಧಿಕಾರಿಗಳು ಮದುವೆ ನಿಲ್ಲಿಸುವಂತೆ ಮುಚ್ಚಳಿಕೆ ಬರೆಸಿಕೊಂಡು ಮದುವೆ ನಿಲ್ಲಿಸಲು ಸೂಚನೆ ನೀಡಿದ್ದಾರೆ.