ಬೆಂಗಳೂರು: ಸ್ವಂತ ಕಾರು ಇರುವವರಿಗೆ ‘BPL’ ಕಾರ್ಡ್ ನೀಡದಿರಲು ಚಿಂತನೆ ನಡೆಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ಧಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೈಟ್ ಬೋರ್ಡ್ ಕಾರು ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ, ಯೆಲ್ಲೋ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದನ್ನು ವಾಪಸ್ಸು ಪಡೆಯಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದ ಜೊತೆ ಪಿಯೂಶ್ ಗೋಯಲ್ ಅವರೊಂದಿಗೆ ಮಾತನಾಡಿದ್ದು ಅಕ್ಕಿ ನೀಡುವುದಿಲ್ಲ ಎಂದು ಹೇಳಿದ್ದು, ಈ ವಿಚಾರದಲ್ಲಿ ಅವರು ರಾಜಕೀಯ ಮಾಡಿದ್ದಾರೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯು ನಮ್ಮ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆ.ಜಿ ಪಡಿತರ ಧಾನ್ಯ ಮತ್ತು ಆದ್ಯತಾ ಪಡಿತರ ಚೀಟಿಯ ಫಲಾನುಭವಿಗಳಿಗೆ 5 ಕೆ.ಜಿ ಪಡಿತರ ಧಾನ್ಯದ ಜೊತೆಗೆ ಹೆಚ್ಚುವರಿಯಾಗಿ ತಲಾ 5 ಕೆ.ಜಿ ಪಡಿತರ ಧಾನ್ಯ ಸೇರಿ ಒಟ್ಟು ತಲಾ 10 ಕೆ.ಜಿ. ಪಡಿತರ ನೀಡುವುದು ಈ ಗ್ಯಾರಂಟಿ ಯೋಜನೆಯ ಉದ್ದೇಶವಾಗಿದೆ ಎಂದರು.
ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ಒಂದೇ ತಿಂಗಳೊಳಗೆ 1 ಕೋಟಿಗೂ ಅಧಿಕ ಪಡಿತರ ಕುಟುಂಬಗಳ ಫಲಾನುಭವಿಗಳಿಗೆ 566 ಕೋಟಿ ರೂ. ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.