ಬೆಳ್ತಂಗಡಿ: ಟೆಲಿಗ್ರಾಂನಲ್ಲಿ ಶಿಕ್ಷಕಿಯೊಬ್ಬರಿಗೆ ಮೆಸೇಜ್ ಮಾಡಿ ಬೆದರಿಸಿ 1 ಲಕ್ಷ ರೂಪಾಯಿ ಪೀಕಿಸಿದಾತನ ಬಂಧನ

ಬೆಳ್ತಂಗಡಿ: ಟೆಲಿಗ್ರಾಂನಲ್ಲಿ ಶಿಕ್ಷಕಿಯೊಬ್ಬರಿಗೆ ಮೆಸೇಜ್ ಮಾಡಿ ಬೆದರಿಸಿ 1 ಲಕ್ಷ ರೂಪಾಯಿ ಪೀಕಿಸಿದಾತನನ್ನು ಬಂಧಿಸಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ಥ್ ಹೆಬ್ಬಾರ್ (23) ಬಂಧಿತ ಆರೋಪಿ. ಆರೋಪಿ ಅಶ್ವತ್ಥ್ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಎಂಬವರಿಗೆ ಮೂರು ಲಕ್ಷ ರೂ. ನೀಡುವಂತೆ ಟೆಲಿಗ್ರಾಂ ನಕಲಿ ಖಾತೆಯ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಪತಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಜ್ಯೋತಿ ವೇಣೂರು ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯಾ ಜೆ. ನೇತೃತ್ವದ ತಂಡ ಆರೋಪಿಯ ಪತ್ತೆ ಕಾರ್ಯಾಚರಣೆಗಿಳಿದಿತ್ತು. ಪೊಲೀಸರ ಸೂಚನೆಯಂತೆ ಜ್ಯೋತಿ ಒಂದು ಲಕ್ಷ ರೂ. ನೀಡುವುದಾಗಿ ಆರೋಪಿಯನ್ನು ಟೆಲಿಗ್ರಾಂ ಸಂದೇಶ ಕಳುಹಿಸಿ ಒಪ್ಪಿಸಿದ್ದರು. ಅದರಂತೆ ಆರೋಪಿ ಬುಧವಾರ ಸಂಜೆ ಅಳದಂಗಡಿ ಕೆದ್ದು ಸಮೀಪ ಹಣ ಎಸೆದು ಹೋಗುವಂತೆ ಸೂಚಿಸಿದ್ದ. ಬಳಿಕ ಅಲ್ಲಿ ಬೇಡ ಎಂದು ಸಂದೇಶ ರವಾನಿಸಿ ಬೇರೊಂದು ಸ್ಥಳ ಸೂಚಿಸಿದ್ದ. ಹೀಗೆ 3-4 ಬಾರಿ ಸ್ಥಳವನ್ನು ಬದಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದ. ಕೊನೆಗೆ ಆರೋಪಿ ಶಿರ್ಲಾಲು ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಎಸೆದು ಹೋಗುವಂತೆ ಸೂಚಿಸಿದ್ದಾನೆನ್ನಲಾಗಿದೆ. ಅದರಂತೆ ಜ್ಯೋತಿ ಹಣದ ಕಟ್ಟನ್ನು ಎಸೆದು ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹಣವನ್ನು ಹೆಕ್ಕಿಕೊಳ್ಳುತ್ತಿದ್ದಂತೆ ಮೊದಲೇ ಕಾದು ಕುಳಿತಿದ್ದ ಪೊಲೀಸರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ. ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ತಡರಾತ್ರಿ ಆತನನ್ನು ಗುಂಡೇರಿ ಸಮೀಪ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿಯಿಂದ ಒಂದು ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Check Also

ಜುಲೈ.23ರಂದು 2024-25ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ( Union Budget ) ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ …

Leave a Reply

Your email address will not be published. Required fields are marked *

You cannot copy content of this page.