May 25, 2025
WhatsApp Image 2025-05-04 at 10.06.18 AM

ಚಿಕ್ಕಮಗಳೂರು: ಪಹಲ್ಗಾಮ್​​ನಲ್ಲಿ ಉಗ್ರರ ದಾಳಿ ಮತ್ತು ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನಾಳೆ (ಮೇ 05) ಬಂದ್​ಗೆ ಕರೆ ನೀಡಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಚಿಕ್ಕಮಗಳೂರು ನಗರ ಸೇರಿದಂತೆ 9 ತಾಲೂಕಿನಲ್ಲಿ ಬಂದ್​ ಮಾಡಲು ನಿರ್ಧರಿಸಲಾಗಿದೆ. ಸ್ವಯಂ ಘೋಷಿತರಾಗಿ ಅಂಗಡಿ ಮುಂಗಟ್ಟು ಬಂದ್​ ಮಾಡುವಂತೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಭಜರಂಗದಳ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಪಾಕಿಸ್ತಾನದ ಮುಸ್ಲಿಂರು ಹಿಂದೂಗಳನ್ನ ಹತ್ಯೆ ಮಾಡುತ್ತಿದ್ದಾರೆ. ಭಜರಂಗದಳದ ಕಾರ್ಯಕರ್ತರನ್ನ ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದಾರೆ. ಇದನ್ನ ಖಂಡಿಸಿ ನಾವು ಚಿಕ್ಕಮಗಳೂರು ಬಂದ್ ಕರೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಸರ್ಕಾರಿ ಬಸ್ ಸೇರಿದಂತೆ ಸಾರಿಗೆ ಸಂಚಾರಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು, ಹೋಟೆಲ್ ಬಂದ್ ಮಾಡಲು ಮನವಿ ಮಾಡಿರುವುದಾಗಿ ರಂಗನಾಥ್​ ಅವರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಸದ್ಯ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಹಿಂದೂಗಳು ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ ಎಂದು ನಿನ್ನೆ ಮಂಗಳೂರು ಪೊಲೀಸ್​ ಆಯುಕ್ತ ಅನುಪಮ್ ಅಗರ್ವಾಲ್​ ಹೇಳಿದ್ದಾರೆ.

ಇನ್ನು ಬಂಧಿತ ಇಬ್ಬರು ಹಿಂದೂಗಳಾದ ನಾಗರಾಜ್ ಮತ್ತು ರಂಜಿತ್ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವರು. ಹೀಗಾಗಿ ಕಾಫಿನಾಡಿನಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಪಕ್ಕದ ದಕ್ಷಿಣ ಕನ್ನಡದಿಂದ ಬರುವ ಪ್ರತಿ ವಾಹನಗಳ ಮೇಲೆ ಕಣ್ಣಿಟ್ಟಿದ್ದು, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಚಾರ್ಮಾಡಿ ಘಾಟಿ ಮಾರ್ಗವಾಗಿ ಬರುವ ಪ್ರತಿ ವಾಹನಗಳನ್ನ‌ ತಪಾಸಣೆ ನಡೆಸಿದ್ದಾರೆ.

ದಿನದ 24 ಗಂಟೆಗಳ ಕಾಲ ಕೊಟ್ಟಿಗೆಹಾರ ಚೆಕ್​ ಪೋಸ್ಟ್​ನಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದು, ಜಿಲ್ಲೆಗೆ ಬರುವ ಮತ್ತು ಹೊರ ಹೋಗುವ ಪ್ರತಿಯೊಬ್ಬರ ಮೇಲು ಪೊಲೀಸ್ ಇಲಾಖೆ ಕಣ್ಣಿಟ್ಟಿದೆ . ಕೋಮು ಸೂಕ್ಷ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಹೈ ಅಲರ್ಟ್ ಆಗಿದ್ದಾರೆ.

 

About The Author

Leave a Reply

Your email address will not be published. Required fields are marked *

<p>You cannot copy content of this page.</p>